ಇತಿಹಾಸವನ್ನು ಆಯಾ ಕಾಲದಲ್ಲಿ ಲಭ್ಯವಿರುವ ಜ್ಞಾನ ಮೂಲಗಳ ಆಧಾರದಿಂದ ಬರೆಯಲಾಗುತ್ತದೆ. ಇಂದು ಜಗತ್ತಿನ ವಿವಿಧ ಮೂಲೆಗಳಿಂದ ಆ ರೀತಿಯ ಇತಿಹಾಸದ ಬರವಣಿಗೆಯಾಗುತ್ತಿರುವುದು, ದಾಖಲಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಆದರೂ, ಕನ್ನಡದಲ್ಲಿ, ಈ ಕೆಲಸ ಅಷ್ಟಾಗಿ ಆಗಿಲ್ಲ. ಆಗಿರುವ ಸ್ವಲ್ಪ ಕೆಲಸವೂ, ದುರ್ಲಭವಾಗಿದ್ದು, ಸಾಮಾನ್ಯರಿಗೆ ಅವುಗಳನ್ನು ಪಡೆಯುವುದೂ, ಬಳಸುವುದೂ ಸಾಕಷ್ಟು ಕಷ್ಟವೇ ಆಗಿದೆ. ಇದಲ್ಲದೆ, ಇನ್ನೊಂದು ತೊಂದರೆಯೆಂದರೆ, ಆ ಜ್ಞಾನ ಮೂಲಗಳೆಲ್ಲವೂ, ಒಂದೆಡೆ ಲಭ್ಯವಾಗುತ್ತಿಲ್ಲ. ಇವೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು, ನಾವು ಕೆಲವು ಗೆಳೆಯರು ಜೊತೆಯಾಗಿ ಕೇಂದ್ರೀಕೃತವಾಗಿ ಜ್ಞಾನ ಭಂಡಾರದ ಲಭ್ಯತೆಯನ್ನು ಸೃಷ್ಟಿಸಲು, ದಾಖಲಾಗಿಗಳನ್ನು ಮಾಡಲು, ಈ ಕುರಿತು ಅರಿವು ಮೂಡಿಸಲು, ಒಂದು ಗುಂಪನ್ನು ಕಟ್ಟಿಕೊಂಡೆವು. ಅದಕ್ಕೆ ನಾವು `ಸಂಚಿ ಫೌಂಡೇಷನ್’ ಎಂದು ಹೆಸರಿಟ್ಟಿದ್ದೇವೆ.

 

“ಸಂಚಿ” ಒಂದು ಲಾಭರಹಿತ ಸಂಸ್ಥೆಯಾಗಿದ್ದು, ದೃಶ್ಯ-ಶ್ರಾವ್ಯ ಮಾಧ್ಯಮದ ಮೂಲಕ ದಾಖಲೀಕರಣದ ಕೆಲಸದಲ್ಲಿ ತೊಡಗಿದೆ.

ನಾವು ಜನಪದ, ಶಾಸ್ತ್ರೀಯ ಹಾಗೂ ಇತರ ಜ್ಞಾನ ಮೂಲಗಳನ್ನು ನಮ್ಮ ಸಾಮರ್ಥ್ಯಕ್ಕನುಗುಣವಾಗಿ ದಾಖಲಿಸುವ ಆಶಯವನ್ನು ಹೊಂದಿದ್ದೇವೆ. ದಾಖಲೀಕರಣ ಎನ್ನುವುದು ಹೆಚ್ಚಿನವರಿಂದ ಉಪೇಕ್ಷಿತವಾಗಿರುವ ವಿಚಾರವಾಗಿದೆ. ಅನೇಕರಿಗೆ ಅದರ ಪ್ರಜ್ಞೆ ಇದ್ದರೂ, ಅದಕ್ಕಿರುವ ಉತ್ತಮ ಮಾರ್ಗಗಳ ಕುರಿತಾಗಿ ತಿಳಿದಿಲ್ಲ. ಇದನ್ನು ಗಮನದಲ್ಲಿ ಇರಿಸಿಕೊಂಡು, ನಾವು ಅಂತರ್ಜಾಲದಲ್ಲಿ ಉಚಿತವಾಗಿ ಸಿಗುವ ಸರಳವಾದ ದಾಖಲೀಕರಣ ಸಂಬಂಧೀ ಮಾಹಿತಿಗಳನ್ನು ರೂಪಿಸುವತ್ತಲೂ ನಮ್ಮ ಗಮನ ಹರಿಸಿದ್ದೇವೆ. ದಾಖಲೀಕರಣಕ್ಕೆ ಸಂಬಂಧಿಸಿದ ಕಾರ್ಯಾಗಾರಗಳನ್ನು, ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳುವುದೂ ನಮ್ಮ ಉದ್ದೇಶವಾಗಿದೆ. ನಮ್ಮ ಈ ಪ್ರಯತ್ನಗಳು ದಾಖಲೀಕರಣದ ಕುರಿತಾಗಿ ಜಾಗ್ರತವಾಗಿರುವ ಒಂದು ಸಮುದಾಯವನ್ನೇ ಸೃಷ್ಟಿಸುವ ಆಶಯವನ್ನು ಹೊಂದಿದ್ದೇವೆ. ಈಮೂಲಕ ಸಮುದಾಯದ ಭಾಗವಹಿಸುವಿಕೆಯಿಂದ ಒಂದು ಸಮೃದ್ಧ ಜ್ಞಾನ ಸಮುಚ್ಛಯವಾಗುವ ಹಿರಿದಾದ ಆಶಯ ಸಂಚಿ ಫೌಂಡೇಷನ್ನಿಗಿದೆ. ನಮ್ಮ ಇಡೀ ದಾಖಲಾತಿಯ ಭಂಡಾರವನ್ನು ಸಮುದಾಯಕ್ಕೆ ಉಚಿತವಾಗಿ ತೆರೆದಿಡುವ ಕಲ್ಪನೆ ಸಂಚಿ ಫೌಂಡೇಶನ್ನಿನದ್ದು. ಹೀಗಾಗಿ ಸಂಚಿಯ ಮೂಲಕ ರೂಪುಗೊಂಡ ಎಲ್ಲಾ ದಾಖಲಾತಿಗಳು ಕ್ರಿಯೇಟಿವ್ ಕಾಮನ್ಸ್ ಮೂಲಕ ಸಾರ್ವಜನಿಕ ಬಳಕೆಗೆ ಮುಕ್ತವಾಗಿರುತ್ತದೆ. ಆದರೆ ಅದರ ವಾಣಿಜ್ಯಾತ್ಮಕ ಬಳಕೆ ನಿಶಿದ್ಧವಾಗಿರುತ್ತದೆ. ಸಂಚಿ ಫೌಂಡೇಷನ್ ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಅದರ ಎಲ್ಲಾ ಚಟುವಟಿಕೆಗಳು ಸಾರ್ವಜನಿಕರ ಉದಾತ್ತ ದೇಣಿಗೆಗಳು ಹಾಗೂ ಸಾರ್ವಜನಿಕ ಸಹಭಾಗಿತ್ವದಿಂದಲೇ ನಡೆಯುತ್ತದೆ. ಹೀಗಾಗಿ ನೀವು ನಮ್ಮ ಯಾವುದೇ ವೀಡಿಯೋ ನೋಡಿದಾಗ, ನಿಮ್ಮ ಉದಾತ್ತ ದೇಣಿಗೆಯನ್ನು ನೀಡಲು ನಾವು ಪ್ರೋತ್ಸಾಹಿಸುತ್ತೇವೆ. ಜೊತೆಗೇ, ನಿಮ್ಮಲ್ಲಿರುವ, ನಿಮಗೆ ಸಾರ್ವಜನಿಕ ಪ್ರದರ್ಶನದ ಅಧಿಕಾರವಿರುವ ಯಾವುದಾದರೂ, ವೀಡಿಯೋ, ಚಿತ್ರಗಳು, ಧ್ವನಿ ಮುದ್ರಿಕೆಗಳು ಇದ್ದಲ್ಲಿ, ಅವುಗಳನ್ನು ಸಾರ್ವಜನಿಕರಿಗೆ ಮುಕ್ತವಾಗಿ ಒದಗಿಸಲೂ ನಮ್ಮ ವೇದಿಕೆಯನ್ನು ನೀವು ಬಳಸಿಕೊಳ್ಳಬಹುದಾಗಿದೆ. ಬನ್ನಿ ಜ್ಞಾನವನ್ನು ಮುಕ್ತಗೊಳಿಸೋಣ.

ವಿಡಿಯೋ ವಿಭಾಗ

ಈ ವಿಭಾಗವು ನಮ್ಮಲ್ಲಿನ ವೀಡಿಯೋ ದಾಖಲೀಕರಣಗಳ ಸಂಗ್ರಹವನ್ನು ತೋರಿಸುತ್ತದೆ. ಇಲ್ಲಿ ನಿಮಗೆ ಕಿರುಚಿತ್ರಗಳು ಹಾಗೂ ಇತರ ಸಂಪಾದಿಸಿದ ವೀಡಿಯೋಗಳು ಲಭ್ಯವಿರುತ್ತವೆ. ವೀಡಿಯೋ ದಾಖಲೀಕರಣವನ್ನು ಮಾಡುವ ಕೆಲಸವನ್ನು ಸಂಚಿ ಫೌಂಡೇಷನ್ ತಾನೇ ಮಾಡುತ್ತದಾದರೂ, ಸಮುದಾಯದಿಂದ ದೇಣಿಗೆಯಾಗಿ ಬಂದ ವೀಡಿಯೋಗಳನ್ನೂ ಇಲ್ಲಿ ಪ್ರದರ್ಶಿಸಲಾಗುತ್ತದೆ.

ಆಡಿಯೋ ವಿಭಾಗ

ಈ ವಿಭಾಗದಲ್ಲಿ ಧ್ವನಿ ಮುದ್ರಿಕೆಗಳನ್ನು ಸಂಗ್ರಹಿಸಲಾಗಿದೆ. ಹಿರಿಯ ವ್ಯಕ್ತಿಗಳ, ಮೌಖಿಕ ಪರಂಪರೆಯ ದಾಖಲೀಕರಣಗಳನ್ನು ಈ ವಿಭಾಗದಲ್ಲಿ ದೊರೆಯುವಂತೆ ಮಾಡಲಾಗುತ್ತದೆ. ಸಂಚಿ ಫೌಂಡೇಷನ್ ತಾನು ಸ್ವತಃ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದರೂ, ಸಮುದಾಯದಿಂದ ನೀಡಲ್ಪಟ್ಟ ದಾಖಲೀಕರಣವನ್ನೂ ಇಲ್ಲಿ ಸೇರಿಸಿಕೊಳ್ಳಲಾಗುವುದು. ಹೆಚ್ಚಿನ ವಿವರಗಳನ್ನು ಈ ವಿಭಾಗದಲ್ಲಿ ವಿವರಿಸಲಾಗಿದೆ.

ಪಠ್ಯ ವಿಭಾಗ

ಈ ವಿಭಾಗದಲ್ಲಿ, ಪ್ರಕಟವಾಗದಿರುವ ಪುಸ್ತಕಗಳು, ಹಕ್ಕುಗಳನ್ನು ಮುಕ್ತಗೊಳಿಸಿರುವ ಪುಸ್ತಕಗಳು, ಇತ್ಯಾದಿ ದಾಖಲೀಕರಣ ಸಂಗ್ರಹ ದೊರೆಯುತ್ತದೆ. ಈ ವಿಭಾಗಕ್ಕೆ ನಿಮ್ಮಲ್ಲಿರುವ ಸಂಗ್ರಹ ಯೋಗ್ಯ ಎಲ್ಲಾ ರೀತಿಯ ಅಕ್ಷರ ದಾಖಲೆಗಳನ್ನು ನೀಡಬಹುದು. ಸಮುದಾಯದ ಕೊಡುಗೆಯಿಂದ ಈ ಸಂಗ್ರಹ ಬೆಳೆಯಬೇಕಿದೆ.

ತರಬೇತಿ

ದಾಖಲೀಕರಣದ ಸಂಬಂಧೀ ಅನೇಕ ಬರಹಗಳು, ಉಲ್ಲೇಖಗಳು, ತರಬೇತಿಗಳು ಈ ವಿಭಾಗದಲ್ಲಿ ಲಭ್ಯ. ದಾಖಲೀಕರಣದ ಮಹತ್ವದ ಅರಿವು ಮುಡಿಸುವುದು, ಸ್ಥಳೀಯವಾಗಿ ನಡೆಯುವ ದಾಖಲೀಕರಣಗಳನ್ನು ಸರಿಯಾದ ರೀತಿಯಲ್ಲಿ ಹೇಗೆ ಮಾಡುವುದು ಎನ್ನುವ ಅರಿವನ್ನು ಮೂಡಿಸುವುದು ಈ ವಿಭಾಗದ ಆಶಯ.

ಸಂಚಿಯ ಶ್ರಮವನ್ನು ಬೆಂಬಲಿಸಿ

You can support “Sanchi Foundation” by donating a small amount. You can also involve yourself in our projects effectively by sharing your ideas, organizing events, implementing and executing projects which make big difference or also by making a small payment towards donations.

All donations to Sanchi Foundation (R) get 80G income tax exemption.