ಇತ್ತೀಚೆಗೆ ನಾನೂ ಡಿಜಿಟಲ್ ಸಿನೆಮಾ ಮೇಕಿಂಗ್ ಪ್ರಪಂಚಕ್ಕೆ ಕಾಲಿಟ್ಟಿದ್ದೇನೆ. ನೋಡು ನೋಡುತ್ತಿದ್ದಂತೆಯೇ ಸೆಲ್ಯುಲಾಯ್ಡ್ ಕಣ್ಮರೆಯಾಗಿ ಡಿಜಿಟಲ್ ಎಲ್ಲೆಡೆ ಆವರಿಸಿಕೊಂಡು ಬಿಟ್ಟಿದೆ. ಇವತ್ತು ಕನ್ನಡಲ್ಲಿ ಹೆಚ್ಚೂ ಕಡಿಮೆ ಎಲ್ಲಾ ಚಿತ್ರಗಳು ಡಿಜಿಟಲ್ ತಂತ್ರಜ್ಞಾನದಲ್ಲೇ ಚಿತ್ರೀಕರಿಸಲ್ಪಡುತ್ತಿವೆ. ನನ್ನ ಕಳೆದ ಮೂರೂ ಚಿತ್ರಗಳಲ್ಲಿ ಸೆಲ್ಯುಲಾಯ್ಡ್ ಬಳಸಿದ ಅವಕಾಶ ನನ್ನದಾಗಿತ್ತು. ಬಹುಷಃ ಸಿನೆಮಾ ಮಾಡಲು ಸೆಲ್ಯುಲಾಯ್ಡ್ ಬಳಸುವ ಕೊನೆಯ ಪೀಳಿಗೆ ನನ್ನದೇ ಆಗಿತ್ತೆಂದು ನನಗೆ ಅನಿಸುತ್ತದೆ. ಸಿನೆಮಾ ಒಂದು ನಿಶ್ಚಿತ ಘಟ್ಟವನ್ನು ದಾಟಿದ್ದಂತೂ ನಿಜ.

ನಾನು ಡಿಜಿಟಲ್ ಸಿನೆಮಾ ಕ್ಷೇತ್ರವನ್ನು ಬಹಳ ಕಿರಿಯ ದಾರಿಯಲ್ಲೇ ಪ್ರವೇಷಿಸಿದ್ದೇನೆ. ವೀಡಿಯೋ ಮಾಡಲು, ಕ್ಯಾನನ್ ಕಂಪನಿಯ ೫ಡಿ ಮಾರ್ಕ್ ೩ ಕ್ಯಾಮರಾ ಕೊಂಡುಕೊಂಡೆ. ಮೂಲತಃ ಸ್ಥಿರಚಿತ್ರಣಕ್ಕೆಂದು ರೂಪಗೊಳಿಸಲಾಗಿರುವ ಈ ಕ್ಯಾಮರಾದ ಮೊದಲ ತಲೆಮಾರು ಮಾರ್ಕ್ ೨ ಬಂದಾಗ ಅದರಲ್ಲಿ ಎಚ್.ಡಿ. ವೀಡಿಯೋ ಸಾಧ್ಯತೆಯನ್ನೂ ಕೊಟ್ಟಿದ್ದರು. ಆದರೆ ಅದರಲ್ಲಿನ ವೀಡಿಯೋ ಸಾಧ್ಯತೆ ಅಚಾನಕ್ಕಾಗಿ ಬಹಳ ದೊಡ್ಡ ಯಶಸ್ಸನ್ನು ಪಡೆದಾಗ ಮಾರ್ಕ್ ೩ ಕ್ಯಾಮರಾದಲ್ಲಿ ಇನ್ನೂ ಕೆಲವು ಸುಧಾರಣೆಗಳನ್ನು ಮಾಡಿ ಬಿಡುಗಡೆಗೊಳಿಸಲಾಯಿತು. ಮಾರ್ಕ್ ೩ಯಲ್ಲಿ ಮೊದಲ ತಲೆಮಾರಿನಲ್ಲಿ ಇಲ್ಲದ ಹೆಡ್ ಫೋನ್ ಜ್ಯಾಕನ್ನೂ ಕೊಡಲಾಗಿದೆ. ಇದರಿಂದ ಸಾಕ್ಷ್ಯಚಿತ್ರಗಳನ್ನು ಮಾಡುವವರಿಗಂತೂ ಇದು ಅದ್ಭುತ ಕೊಡುಗೆ ಎಂದೇ ಹೇಳಬಹುದು. ಮೊದಲು ೧೬ಎಮ್.ಎಮ್ ಅಥವಾ ೩೫ಎಮ್.ಎಮ್ ಸೆಲ್ಯುಲಾಯ್ಡ್ ಕ್ಯಾಮರಾಗಳಾನ್ನು ಹಿಡಿದುಕೊಂಡು ಸಾಕ್ಷ್ಯಚಿತ್ರಗಳನ್ನು ಮಾಡುತ್ತಿದ್ದ ಯುಗಕ್ಕೆ ಇನ್ನೊಂದು ರೀತಿಯಲ್ಲಿ ನಾವು ಬಂದಿದ್ದೇವೆ ಎಂದೂ ಹೇಳಬಹುದಾಗಿದೆ.

ಇತ್ತೀಚೆಗೆ ಹಿರಿಯ ಮಿತ್ರರಾದ ಎನ್.ಎ.ಎಂ ಇಸ್ಮಾಯಿಲ್ ಜೊತೆಗೆ ಸೇರಿಕೊಂಡು ನಾನೊಂದು ದೀರ್ಘ ಸಾಕ್ಷ್ಯಚಿತ್ರವನ್ನು ಆರಂಭಿಸಿದ್ದೇನೆ. ಇದಕ್ಕೆ ಆಗಲೇ ೫ಡಿ ಕ್ಯಾಮರಾ ಬಳಸಲಾರಂಭಿಸಿದ್ದೇನೆ. ಇದರ ಮೂಲಕ ಬಿಂಬಗಳನ್ನು ರೂಪಿಸುವ ಸಂತೋಷವೇ ಅನನ್ಯವಾದದ್ದು. ಈಗಾಗಲೇ ಪವನ್ ಕುಮಾರ್ ಲೂಸಿಯಾ ಚಿತ್ರದ ಮೂಲಕ ೫ಡಿ ಮಾರ್ಕ್ ೨ ಸಾಧ್ಯತೆಗಳನ್ನು ಅದ್ಭುತವಾಗಿ ಬಳಸಿಕೊಂಡದ್ದು ನಿಮಗೆಲ್ಲಾ ತಿಳಿದಿರಬಹುದು. ಈ ತೀರಾ ಕಡಿಮೆ ವೆಚ್ಚದ (ಸಿನೆಮಾ ಕ್ಯಾಮರಾಗಳ ಹೋಲಿಕೆಯಲ್ಲಿ ಕಡಿಮೆ ಅಷ್ಟೇ!) ಕ್ಯಾಮರಾದಿಂದ ಸಿನೆಮಾ ಜಗತ್ತಿನಲ್ಲಿ ಹೊಸ ಸಾಧ್ಯತೆಗಳಂತೂ ತೆರೆದಿವೆ. ಆದರೆ ಸಿನೆಮಾದ ವಿಭಿನ್ನ ಘಟ್ಟಗಳಲ್ಲಿ ನಡೆದ ತಾಂತ್ರಿಕ ಬೆಳವಣಿಗೆಗಳಿಂದ ಹುಟ್ಟಿದ ಒಂದು ಹೊಸ ರೀತಿಯ ಕಥನ ಕ್ರಮ ಇನ್ನೂ ಡಿಜಿಟಲ್ ಮಾಧ್ಯಮದ ಅಧಿಪತ್ಯ ಆರಂಭವಾದ ಮೇಲೆ ಆಗಿಲ್ಲ. ನಾವಿನ್ನೂ ಹಳೆ ಕ್ಯಾಮರಾಗಳಿಗೆ ಪರ್ಯಾಯವಾಗಿ, ಮಿತವ್ಯಯದ ಸೂತ್ರವಾಗಷ್ಟೇ ಈ ಡಿಜಿಟಲ್ ಮಾಧ್ಯಮವನ್ನು ನೋಡುತ್ತಿದ್ದೇವೆ. ಇದರಿಂದ ಮಾಧ್ಯಮಕ್ಕೆ ಒಂದು ಹೊಸ ವ್ಯಾಕರಣವನ್ನು ಕಟ್ಟುವ ಕೆಲಸ ಆಗಬೇಕಾಗಿದೆ.

ಜೊತೆಯಲ್ಲಿ ಈ ಡಿಜಿಟಲ್ ತಂತ್ರಜ್ಞಾನದಿಂದ ಮಾರುಕಟ್ಟೆಯ ಸ್ಥಿತಿಯೂ ಬದಲಾಗುವ ಲಕ್ಷಣಗಳು ಕಂಡು ಬರುತ್ತಿವೆ. ೫ಡಿ ಕ್ಯಾಮರಾದಂಥಾ ಸಾಧನೆಗಳಿಂದ ಒಂದೆಡೆ ಸಿನೆಮಾ ಮಾಡುವುದು ಸರಳವಾಗುತ್ತಿದ್ದಂತೆ, ಯು.ಎಚ್.ಓ ಅಥವಾ ಕ್ಯೂಬ್ ರೀತಿಯ ಪ್ರದರ್ಶನಾ ವ್ಯವಸ್ಥೆಗಳಿಂದಾಗಿ ಸಿನೆಮಾಗಳನ್ನು ತೋರಿಸುವ ರೀತಿಯೂ ಸರಳವೂ ಆಗಿದೆ. ಇದು ಮಾರುಕಟ್ಟೆಯನ್ನು ಮತ್ತು ಇಡೀ ಉದ್ಯಮವನ್ನು ಮರುಆವಿಶ್ಕಾರಕ್ಕೆ ಅಣಿ ಮಾಡುತ್ತಿದೆ. ಈ ಸಮುದ್ರ ಮಥನದಿಂದ ಅಮೃತ ಜನಿಸುತ್ತದೆ ಎಂದು ನನ್ನ ನಿರೀಕ್ಷೆ.

ಸಂಚಿ ಫೌಂಡೇಷನ್ ಮಾಸಿಕ ಪತ್ರಿಕೆಗೆ ಚಂದಾದಾರರಾಗಿ‍

Opt for Sanchi Monthly News paper

ಸಂಚಿ ಫೌಂಡೇಷನ್ ಮಾಸಿಕ ಪತ್ರಿಕೆಗೆ ಚಂದಾದಾರರಾಗಿ‍

You have Successfully Subscribed!