ಅತ್ತ ನನ್ನ ತಂದೆಯ (ಅಶೋಕ ವರ್ಧನ) ಬ್ಲಾಗಿನಲ್ಲಿ ಯಕ್ಷಗಾನ ಪ್ರದರ್ಶನವೊಂದಕ್ಕೆ ‘ಕೇಳಿ’ ಹೊಡೆಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಯಕ್ಷಗಾನ ದಾಖಲೀಕರಣದ ಕುರಿತಾಗಿ ಒಂದಿಷ್ಟು ಯೋಚನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳೋಣ ಎನಿಸಿತು ಅದಕ್ಕೇ ಇಲ್ಲಿ ಬಂದೆ ನಾನು. ಇಂದು, ಅನೇಕ ಸಂದರ್ಭಗಳಲ್ಲಿ ನೃತ್ಯ ಪ್ರದರ್ಶನಗಳನ್ನು, ವೀಡಿಯೋದಲ್ಲಿ ದಾಖಲಿಸುವುದನ್ನು ನಾವು ಕಾಣುತ್ತೇವೆ. ನಾನೂ ಈ ಹಿಂದೆ ಸಾಲಿಗ್ರಾಮ ಮಕ್ಕಳ ಮೇಳ, ಯಕ್ಷಗಾನ ಕೇಂದ್ರ, ಉಡುಪಿ ಹೀಗೆ ಅನೇಕ ತಂಡಗಳ ಅಧ್ಬುತ ಪ್ರದರ್ಶನವನ್ನು ದಾಖಲೀಕರಿಸುವ ಭಾಗ್ಯ ಪಡೆದಿದ್ದೆ. ಪ್ರತಿಪ್ರದರ್ಶನದ ದಾಖಲೀಕರಣದಲ್ಲೂ ಒಂದಷ್ಟು ಸಮಸ್ಯೆಗಳನ್ನು ಅನುಭವಿಸಿದ್ದೆ ಮತ್ತೆ ಒಂದಷ್ಟು ಕಲಿತಿದ್ದೆ. ಸಧ್ಯದಲ್ಲೇ ಮತ್ತೊಂದು ಇಂಥಾ ಪ್ರದರ್ಶನದ ದಾಖಲೀಕರಣ ನಡೆಸಲಿದ್ದೇನೆ, ಆ ಸಂದರ್ಭದಲ್ಲಿ ವೀಡಿಯೋ ಕಣ್ಣಿನ ಕುರಿತಾಗಿ ಒಂದಿಷ್ಟು ಮಾತುಗಳು.
ಸಿನೆಮಾದ ಆರಂಭದ ದಿನಗಳಲ್ಲಿ, ಸಿನೆಮಾದ ಮೂಲಕ ಕಥೆ ಹೇಳುವುದು ಎಂದರೆ ಅವರು ವೇದಿಕೆಯ ಮೇಲೆ ನಡೆಯುತ್ತಿದ್ದ ನಾಟಕವನ್ನೋ, ನೃತ್ಯವನ್ನೋ ನೇರ ದಾಖಲೀಕರಿಸಿ ಅದನ್ನೇ ಪರದೆಯ ಮೇಲೆ ತೋರಿಸಲು ಮಾಡಿದ ಪ್ರಯತ್ನಗಳಾಗಿದ್ದುವು. ಆದರೆ ಅಲ್ಲಿ ಸಿನೆಮಾ ಮಾಧ್ಯಮ ಕೇವಲ ದಾಖಲೀಕರಣ ಉಪಕರಣವಾಗಿ ಬಳಕೆಯಾಗುತ್ತಿತ್ತು. ಹಾಗಾದರೆ ಈ ಮಾಧ್ಯಮದ ಶಕ್ತಿ ಇಷ್ಟೆಯೇ? ಎಂದು ಸಂಶಯ ಪಡುವಷ್ಟರಲ್ಲಿ, ಸಂಕಲನದ ಆವಿಷ್ಕಾರವಾಯಿತು. ಇದರಿಂದ ಸಿನೆಮಾ ಮಾಧ್ಯಮದ ಮೂಲಕ ಕಥೆ ಹೇಳುವ ಹೊಸ ವಿಧಾನ ಆರಂಭವಾಯಿತು. ಕ್ಯಾಮರಾವನ್ನು ವಿಷಯದಿಂದ ಬೇರೆ ಬೇರೆ ದೂರದಲ್ಲಿ, ಬೇರೆ ಬೇರೆ ಕೋನದಲ್ಲಿ ಇಡುವುದರಿಂದ ವಿಭಿನ್ನ ಅರ್ಥಗಳನ್ನು ಹುಟ್ಟಿಸುವುದು ಸಾಧ್ಯ ಎಂದು ಜನರು ಶೋಧಿಸುತ್ತಾ ಸಿನೆಮಾ ಮಾಧ್ಯಮವನ್ನು ಬಳಸಿಕೊಳ್ಳಲಾರಂಭಿಸಿದರು. ಇವೆಲ್ಲವುಗಳ ಕೊನೆಗೆ ಒಂದು ವಿಷಯ ದಿಟವಾಗುವುದೇನೆಂದರೆ, ಕ್ಯಾಮರಾ ಕಣ್ಣು ಪ್ರೇಕ್ಷಕರ ಕಣ್ಣೇ ಆಗಿದೆ. ನಿರ್ದೇಶಕನಾದವನು ಅದನ್ನು ಎತ್ತ ಕೊಂಡೊಯ್ಯುತ್ತಾನೋ ಪ್ರೇಕ್ಷಕರೂ ಅವನೊಂದಿಗೇ ಪಯಣಿಸುತ್ತಾ ಕಥೆಯನ್ನು ನೋಡುತ್ತಾರೆ ಎಂದಾಯಿತು.
ನಾಟಕದ ಸಂದರ್ಭವನ್ನೇ ಮತ್ತೆ ತೆಗೆದುಕೊಳ್ಳೋಣ. ವೇದಿಕೆಯ ಮೇಲೆ ನಟರು, ಅವರೆದುರು ಪ್ರೇಕ್ಷಕರು. ವೇದಿಕೆಯ ಮೇಲೆ ಬೇರೆ ಬೇರೆ ನಟರು ಏನೇನೋ ಅಭಿನಯ ಮಾಡುತ್ತಿರುತ್ತಾರೆ. ಇಲ್ಲಿ ಪ್ರೇಕ್ಷಕನಿಗೆ ಯಾವ ನಟನನ್ನು ನೋಡಬೇಕು, ಎಷ್ಟು ಹೊತ್ತಿನವರೆಗೆ ನೋಡಬೇಕು, ಮತ್ತೆ ಆ ನಟನ ನಂತರ ಇನ್ನೆಲ್ಲಿ ನೋಡಬೇಕು ಎನ್ನುವ ಸ್ವಾತಂತ್ರ್ಯ ಇರುತ್ತದೆ. ನಟನನ್ನು ಲಾಂಗ್ ಶಾಟಿನಲ್ಲಿ ನೋಡಬೇಕೇ? ಮಿಡ್ ಶಾಟ್? ಕ್ಲೋಸಪ್? ಇದೂ ಪ್ರೇಕ್ಷಕನದ್ದೇ ನಿರ್ಧಾರವಾಗಿರುತ್ತದೆ. ನಟ ಅಭಿನಯಿಸುತ್ತಾ ಸಾಗುತ್ತಾನೆ. ಹೀಗಾಗಿ ಪ್ರೇಕ್ಷಕರ ಮನಸಿನಲ್ಲಿ ಒಂದು ಕಥನ ನಡೆಯುತ್ತಾ ಸಾಗುತ್ತದೆ, ಅವರಿಗೆ ಬೇಕಾದಂತೆಯೇ ಇಲ್ಲಿ ದೃಶ್ಯ ಸಂಯೋಜನೆ ನಡೆಯುತ್ತಾ ಹೋಗುತ್ತದೆ.
ಆದರೆ ಸಿನೆಮಾದ ಸಂದರ್ಭದಲ್ಲಿ, ಯಾವ ನಟನನ್ನು, ಎಷ್ಟು ಹೊತ್ತು, ಯಾವ ಕೋನದಿಂದ, ಯಾವ ಶಾಟ್ ಮೂಲಕ (ಲಾಂಗ್, ಮಿಡ್, ಕ್ಲೋಸ್ ಇತ್ಯಾದಿ) ನೋಡಬೇಕು ಎನ್ನುವುದನ್ನು ನಿರ್ದೇಶಕನೇ ನಿರ್ಧರಿಸುತ್ತಾನೆ. ಆತನ ಈ ನಿರ್ಧಾರಗಳು ಅವನು ಒಂದು ಕಥೆಯನ್ನು ನೋಡುತ್ತಿರುವ ರೀತಿಯ ಮೇಲೆ ಅವಲಂಬಿಸಿರುತ್ತದೆ. ಹೀಗಿರುವಾಗ ಪ್ರೇಕ್ಷಕನ ಸ್ವಾತಂತ್ರ್ಯ ಭಾರೀ ಪ್ರಮಾಣದಲ್ಲಿ ಕುಂಠಿತಗೊಳ್ಳುತ್ತದೆಯಷ್ಟೇ? ಹೀಗಿರುವಾಗ ಪ್ರೇಕ್ಷಕನಲ್ಲಿ ಯೋಚನೆಗಳನ್ನು ಪ್ರಚೋದಿಸುವ ವಿಸ್ತರಣೆಯ ಅಂಶ ಹೇಗೆ ಹುಟ್ಟಿಸುವುದು? ಇದು ಸಿನೆಮಾದ ಸಮಸ್ಯೆಗಳಲ್ಲಿ ಒಂದು. ಸಮಸ್ಯೆ ಎಂದರೆ, ಋಣಾತ್ಮಕ ಎಂದುಕೊಳ್ಳಬೇಡಿ, ಸಿನೆಮಾ ಇದಕ್ಕೆ ಉತ್ತರವನ್ನು ಕಂಡುಕೊಂಡಿದೆ. ಅದು ತನ್ನ ಪ್ರಮುಖ ಸಾಧನವಾದ ಸಂಕಲನವನ್ನೇ ತನ್ನ ಶಕ್ತಿಯನ್ನಾಗಿಸಿಕೊಂಡು ಈ ಸಮಸ್ಯೆಗೆ ಉತ್ತರ ನೀಡುತ್ತದೆ.
ಈಗ ಹೇಳಿದ ವಿವರಣೆಗಳೆಲ್ಲವೂ ಕಥಾ ಚಿತ್ರೀಕರಣದ ಮಟ್ಟಿಗೆ ಸರಿಯಾಯಿತು. ಆದರೆ ಈ ಹೊಸ ಹೊಳಹುಗಳೊಂದಿಗೆ ಮತ್ತೆ ನೃತ್ಯವನ್ನೇ (ಅಥವಾ ನಾಟಕವನ್ನೇ – ಮೂಲತಃ ವೇದಿಕೆಯ ಮೇಲೆ ನಟನೆ, ಎದುರಿಗೆ ಕ್ಯಾಮರಾ ಸಂದರ್ಭ) ಚಿತ್ರೀಕರಣ ಮಾಡಲು ಹೊರಟಾಗ ಹೊಸ ಸಮಸ್ಯೆಗಳು ಉದ್ಭವವಾಗುತ್ತವೆ. ಇಲ್ಲಿ ‘ಕಟ್’ಅಥವಾ ಸಂಕಲನದ ಪಾತ್ರವೇನು? ಇದು ಅಗತ್ಯವೇ? ಅಥವಾ ಇಡೀ ಪ್ರದರ್ಶನವನ್ನು ‘ವೈಡ್’ ಅಥವಾ ‘ಲಾಂಗ್’ಶಾಟ್ ಮೂಲಕವೇ ತೋರಿಸಬೇಕೇ? ನೃತ್ಯವೆಂಬ ಸ್ಥಳದಲ್ಲೇ ವಿಸ್ತಾರಗೊಳ್ಳುತ್ತಾ ಸಾಗುವ ಅಭಿವ್ಯಕ್ತಿಗೆ ‘ಕಟ್’ ಎನ್ನುವುದು ಸಾಧ್ಯವೇ? ಹಾಗೆ ನಿಲ್ಲಿಸಿ, ಭಿನ್ನ ಕೋನಗಳಿಂದ ಚಿತ್ರೀಕರಿಸಿದರೆ, ಅದು ನೃತ್ಯಪ್ರಕಾರಕ್ಕೆ ನ್ಯಾಯ ಒದಗಿಸೀತೇ? ಹೀಗೆ ಪ್ರಶ್ನೆಗಳು ಅನೇಕ. ನಿಮ್ಮ ಅಭಿಪ್ರಾಯ ತಿಳಿಯಲು ಉತ್ಸುಕನಾಗಿರುವೆ.
Your Voice