Sanhci Identityನೀನಾಸಮ್ ಹಾಗೂ ಸಂಚಿ ಜಂಟಿಯಾಗಿ ಅರ್ಪಿಸುತ್ತಿರುವNINASAM Logo

ಚಿತ್ರ ನಿರ್ಮಾಣ ಕಾರ್ಯಾಗಾರ

 

ಸಿನೆಮಾ ಮಾಧ್ಯಮಕ್ಕೆ ನೂರು ವರ್ಷದಾಟಿದೆ. ತಾಂತ್ರಿಕ ಚಮತ್ಕಾರವಾಗಿ ಆರಂಭವಾದ ಇದು, ಇಂದು ಹಲವು ಆಯಾಮಗಳನ್ನು ಒಳಗೊಂಡ, ಸಂಕೀರ್ಣ ಮಾಧ್ಯಮವಾಗಿ ಬೆಳೆದು ನಿಂತಿದೆ. ತಂತ್ರಜ್ಞಾನ ಆಧರಿತ ಕಲಾಪ್ರಕಾರವಾದ ಸಿನೆಮಾ ಇಂದು ಡಿಜಿಟಲ್ ಯುಗದಲ್ಲಿ ಹೊಸ ಸಾಧ್ಯತೆಗಳು, ಮಿತಿಗಳಲ್ಲಿ ಮತ್ತೆ ಹೊಸದೊಂದು ಕ್ರಾಂತಿಗಾಗಿ ಕಾಯುತ್ತಿದೆ.

ಡಿಜಿಟಲ್ ತಂತ್ರಜ್ಞಾನ ತೀವ್ರಗತಿಯಲ್ಲಿ ಬೆಳೆಯುತ್ತಿರುವ ಸಂದರ್ಭದಲ್ಲಿ, ಹೆಚ್ಚು ತಂತ್ರಜ್ಞಾನ ಆಧರಿತವಾದ ಕಲಾ ಮಾಧ್ಯಮವಾದ ಸಿನೆಮಾ ತಂತ್ರಜ್ಞಾನದಲ್ಲೂ ಸಾಕಷ್ಟು ಬದಲಾವಣೆಯಾಗಿದೆ. ಧ್ವನಿ, ಬಣ್ಣ ಇತ್ಯಾದಿಗಳು ಪರಿಚಯಿಸಲ್ಪಟ್ಟಾಗ ಸಿನೆಮಾ ಮಾಧ್ಯಮದಲ್ಲಿ ಅದರ ಸಾಧ್ಯತೆಗಳನ್ನು ಅರಿತು ಯಶಸ್ವಿಯಾಗಿ ಬಳಸಿಕೊಂಡಂತೆ ಡಿಜಿಟಲ್ ತಂತ್ರಜ್ಞಾನದಲ್ಲಿ ಇನ್ನೂ ಹದ ಮೂಡಿಲ್ಲ. ೩೫ಎಂ.ಎಂ ಸೆಲ್ಯುಲ್ಯಾಯ್ಡ್ ಮಾಧ್ಯಮದಲ್ಲೇ ಕೊನೆಯವರೆಗೂ ಪ್ರದರ್ಶನದಲ್ಲಿ ಇರದಿದ್ದ ಏಕರೂಪತೆಯಂಥಾ ಸಮಸ್ಯೆಯು ಡಿಜಿಟಲ್ ಯುಗಕ್ಕೆ ಮಾಧ್ಯಮವು ಹಠಾತ್ತನೆ ತೆರೆದುಕೊಂಡಾಗ ಇನ್ನಷ್ಟು ಗೊಂದಲಗಳು ಮೂಡಿವೆ. ನೂರು ವರುಷಗಳ ಸುದೀರ್ಘ ಅವಧಿಯಲ್ಲಿ ನಿಧಾನವಾಗಿ ಪಕ್ವತೆ ಕಂಡುಕೊಳ್ಳುತ್ತಿದ್ದ ಸಿನೆಮಾ ವ್ಯಾಕರಣ ಈಗ ಮತ್ತೆ ತೀವ್ರಗತಿಯಲ್ಲಿ ಬದಲಾಗಬೇಕಾಗಿದೆ.

ಕಾಲಾನುಕಾಲದಲ್ಲಿ ಸಮಾಜದ ಒಳಿತಿಗೆ ಅಥವಾ ಆ ಹೆಸರಿನಲ್ಲಿ ಮಾಧ್ಯಮವನ್ನು ಶಿಸ್ತಿಗೆ ಒಳಪಡಿಸುತ್ತಿದ್ದ ಕಾನೂನು, ಧರ್ಮ, ವಿಮರ್ಷಕರು ಇತ್ಯಾದಿ ಬಲಗಳು ಇಂದು ತಾವೂ ಗೊಂದಲಗೊಂಡು ಒಟ್ಟು ಮಾಧ್ಯಮದ ಬಳಕೆದಾರರನ್ನೂ, ಸೃಷ್ಟಿಕರ್ತರನ್ನೂ ಇನ್ನಷ್ಟು ಗೊಂದಲಕ್ಕೆ ಒಳಪಡಿಸುತ್ತಿವೆ. ಡಿಜಿಟಲ್ ತಂತ್ರಜ್ಞಾನದಿಂದಾಗಿ ಮಾಧ್ಯಮವು ಎಲ್ಲರ ಕೈಗೆ ಎಟಕುವಂತಾಗಿರುವುದರಿಂದ, ಈ ಗೊಂದಲ ಇನ್ನಷ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಡಿಜಿಟಲ್ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯೊಂದಿಗೆ, ಡಿಜಿಟಲ್ ಸಿನೆಮಾ ಮಾಧ್ಯಮದ ಸಾಧ್ಯತೆಗಳು, ಬಾದ್ಯತೆಗಳು ಇತ್ಯಾದಿಗಳನ್ನು ತಿಳಿಸಿ, ಇವುಗಳ ಬಳಕೆಯಿಂದ ಚಿತ್ರಗಳನ್ನು ಮಾಡುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಾಗಾರವನ್ನು ಸಿನೆಮಾ ಮಾಧ್ಯಮದಲ್ಲಿ ತೀವ್ರವಾಗಿ ತೊಡಗಿಸಿಕೊಳ್ಳುವ ಆಸಕ್ತರಿಗಾಗಿಯೇ ಮುತುವರ್ಜೆಯಿಂದ ರೂಪಿಸಲಾಗಿದೆ. (ಸಿನೆಮಾವನ್ನು ವೃತ್ತಿಯಾಗಿ ಸ್ವೀಕರಿಸಿದವರು ಮಾತ್ರವಲ್ಲ) ಒಂದು ಕಥೆಯನ್ನು ಕಲ್ಪಿಸಿಕೊಳ್ಳುವುದರಿಂದ ಆರಂಭಿಸಿ ಅದನ್ನು ತೆರೆಯ ಮೇಲೆ ಕಾಣುವವರೆಗಿನ ಪ್ರಕ್ರಿಯೆಯನ್ನು ಪರಿಚಯಿಸುವುದರೊಂದಿಗೆ, ಯಾವುದೇ ಉಪಕರಣವನ್ನು ಹೊಂದಿದ್ದರೂ, ಅದರ ಮಿತಿಯಲ್ಲಿ ಅತ್ಯಂತ ಉತ್ತಮ ಪರಿಣಾಮವನ್ನು ಪಡೆಯುವ ಕುರಿತಾಗಿ ಈ ಕಾರ್ಯಾಗಾರ ಗಮನಹರಿಸಲಿದೆ. ಕಾರ್ಯಾಗಾರದ ಸಂದರ್ಭದಲ್ಲಿ ಅಂತರ್ಜಾಲದಲ್ಲಿ ವೀಡಿಯೋದ ಸಾಧ್ಯತೆಗಳು, ಕಾನೂನುಗಳು ಇತ್ಯಾದಿಗಳನ್ನೂ ಪರಿಚಯಿಸಲಾಗುವುದು ಜೊತೆಗೆ ನುರಿತ ತಂತ್ರಜ್ಞರಿಂದ ಭಾಗಿಗಳ ಬಳಿಯಿರುವ ಉಪಕರಣಗಳಿಂದ ಸಿನೆಮಾ ರೂಪಿಸುವ ಸಾಧ್ಯತೆಗಳನ್ನು ತೋರಿಸಿಕೊಡಲಾಗುವುದು. ಕಾರ್ಯಾಗಾರದ ಕೊನೆಯಲ್ಲಿ ತಂಡವಾಗಿ ನಾಲ್ಕು ಕಿರುಚಿತ್ರಗಳನ್ನೂ ರೂಪಿಸಲಾಗುವುದು.

ತನ್ನ ಉಗಮದಿಂದಲೇ, ಕಲೆ, ಮಾಧ್ಯಮ ಸಂಸ್ಕೃತಿ ಚಿಂತನೆ, ಬಳಕೆ, ವಿಮರ್ಷೆಯಲ್ಲಿ ತೊಡಗಿರುವ ನೀನಾಸಂ ಸಾಂಸ್ಕೃತಿಕ ಪ್ರತಿಷ್ಟಾನ ಈ ಕಾರ್ಯಾಗಾರ ಅತಿಥೇಯ ಸಂಸ್ಥೆಯಾಗಿದೆ. ಡಿಜಿಟಲ್ ಸಿನೆಮಾ ಮಾಧ್ಯಮದ ಈ ಹೊಸ ಯುಗದಲ್ಲಿ ಮುಂದೆ ನಡೆಯಲಿರುವ ಅನೇಕ ಪ್ರಯೋಗಗಳಿಗೆ ನೀನಾಸಂ ಪ್ರಯೋಗಶಾಲೆಯಾಗಲಿದೆ ಎನ್ನುವ ಆಶಯವನ್ನು ನಾವು ಹೊಂದಿದ್ದೇವೆ ಹಾಗೂ ಈ ಕಾರ್ಯಾಗಾರ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದೆ.

ಕಿರುಚಿತ್ರ ನಿರ್ಮಾಣ ಕಾರ್ಯಾಗಾರ
ಸ್ಥಳ: ನೀನಾಸಂ, ಹೆಗ್ಗೋಡು
ದಿನಾಂಕ: ೨ ಮಾರ್ಚ್ ೨೦೧೫ ಬೆಳಗ್ಗಿನಿಂದ ೭ ಮಾರ್ಚ್ ೨೦೧೫ ಸಂಜೆಯವರೆಗೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ೧೦ ಫೆಬ್ರವರಿ ೨೦೧೬
ಕಾರ್ಯಾಗಾರ ಶುಲ್ಕ: ೨೦೦೦೦ ರೂಪಾಯಿಗಳು (ಊಟ, ವಸತಿ ಸೇರಿದೆ. ಪ್ರಯಾಣ ಪ್ರತ್ಯೇಕ)

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ.

ಕಾರ್ಯಾಗಾರದಲ್ಲಿನ ಸಂಪನ್ಮೂಲ ವ್ಯಕ್ತಿಗಳ ಪರಿಚಯ

ಅಭಯ ಸಿಂಹ
ಕಾರ್ಯಾಗಾರ ನಿರ್ದೇಶಕ

ಇವರು ಪೂನಾದ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟಿನಲ್ಲಿ ನಿರ್ದೇಶನವನ್ನು ಕಲಿತು ಕನ್ನಡದಲ್ಲಿ ಚಲನಚಿತ್ರ ನಿರ್ದೇಶನದಲ್ಲಿ ನಿರತರಾಗಿದ್ದಾರೆ. ಅವರ ಮೊದಲ ಚಿತ್ರ ಗುಬ್ಬಚ್ಚಿಗಳು ೨೦೦೮ರಲ್ಲಿ ಅತ್ಯುತ್ತಮ ಮಕ್ಕಳ ಚಿತ್ರ ಸ್ವರ್ಣ ಕಮಲ ಪ್ರಶಸ್ತಿಯನ್ನು ಪಡೆದಿದೆ. ಅನೇಕ ದೇಶೀ, ವಿದೇಶೀ ಚಲನಚಿತ್ರೋತ್ಸವಗಳಲ್ಲಿಯೂ ಇದು ಪ್ರದರ್ಶನವನ್ನು ಕಂಡಿದೆ. ಮಲಯಾಳದ ಶ್ರೇಷ್ಠ ನಟರಲ್ಲಿ ಒಬ್ಬರಾದ ಮಮ್ಮುಟ್ಟಿಯವರನ್ನು ಕನ್ನಡಕ್ಕೆ ಪರಿಚಯಿಸಿದ ಶ್ರೇಯವೂ ಅಭಯ ಸಿಂಹರ ಎರಡನೇ ಚಿತ್ರ ಶಿಕಾರಿಗೆ ಲಭಿಸಿದೆ. ಮೂರನೇ ಚಿತ್ರ ಮುಖ್ಯವಾಹಿನಿಯ ಚಿತ್ರವಾಗಿದ್ದು, ಕನ್ನಡದ ನಾಯಕ ನಟ, ಗಣೇಶ್ ಅಭಿನಯದ ಸಕ್ಕರೆ ೨೦೧೩ರಲ್ಲಿ ಬಿಡುಗಡೆಕಂಡಿದೆ. ಇದರ ಜೊತೆಯಲ್ಲಿ ಮೂವತ್ತಕ್ಕೂ ಹೆಚ್ಚು ಸಾಕ್ಷ್ಯಚಿತ್ರಗಳು, ಕಿರುಚಿತ್ರಗಳು ಇತ್ಯಾದಿಗಳನ್ನು ಅಭಯ ಸಿಂಹ ನಿರ್ದೇಶಿಸಿದ್ದಾರೆ. ಅನೇಕ ಪ್ರಮುಖ ಸಂಸ್ಥೆಗಳಲ್ಲಿ ಸಿನೆಮಾ ಕಲೆಯನ್ನು ಕಲಿಸುವುದರಲ್ಲೂ ಅಭಯ ಸಿಂಹರಿಗೆ ವಿಶೇಷ ಪರಿಶ್ರಮವಿದೆ.

 

ಎನ್.ಎ.ಎಂ ಇಸ್ಮಾಯಿಲ್
ಕಾರ್ಯಾಗಾರ ಸಹನಿರ್ದೇಶಕ

ಇವರು ಸಕ್ರಿಯ ಪತ್ರಕರ್ತರಾಗಿ ಇಪ್ಪತ್ತು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಅನೇಕ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದು, ಸಧ್ಯಕ್ಕೆ ಪ್ರಜಾವಾಣಿಯಲ್ಲಿ ಪ್ರಧಾನ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೊತೆಯಲ್ಲಿ ಪ್ರಜಾವಾಣಿಯ ಅಂತರ್ಜಾಲ ಆವೃತ್ತಿಯ ವಿಶೇಷ ಜವಾಬ್ದಾರಿಯನ್ನೂಇವರು ನಿರ್ವಹಿಸುತ್ತಿದ್ದು, ಈ ನವಮಾಧ್ಯಮದ ಸಾಧ್ಯತೆ, ಸೀಮಿತತೆಗಳ ಕುರಿತಾಗಿ ವಿಶೇಷ ಪರಿಣತಿಯನ್ನು ಹೊಂದಿದ್ದಾರೆ. ಇಸ್ಮಾಯಿಲ್ ಅವರಿಗೆ ಫೋಟೋಗ್ರಫಿ, ಸಿನೆಮಾ, ಸಾಹಿತ್ಯ, ರಾಜಕೀಯ ಎಲ್ಲವೂ ಆಸಕ್ತಿಯ ಕ್ಷೇತ್ರಗಳಾಗಿದ್ದು, ಡಿಜಿಟಲ್ ಯುಗವನ್ನು ಉದ್ದಕ್ಕೂ ಬೆರಗುಗಣ್ಣಿನಿಂದ ನೋಡುತ್ತಾ ಬಂದಿರುವ ಇವರು ಕಳೆದ ಹಲವು ವರ್ಷಗಳಿಂದ ಅದರ ಒಳಹೊಕ್ಕು ಅರ್ಥ ಮಾಡಿಕೊಂಡಿದ್ದಾರೆ.

 

ಕೆ.ವಿ. ಅಕ್ಷರ
ಕಾರ್ಯಾಗಾರ ಅತಿಥೇಯ

ರಂಗಕರ್ಮಿ ಕೆ. ವಿ. ಅಕ್ಷರ ಕರ್ನಾಟಕದ ಸಮಕಾಲೀನ ಸಂಸ್ಕೃತಿ ಚಿಂತಕರಲ್ಲೊಬ್ಬರು. ಹೆಗ್ಗೋಡಿನಲ್ಲಿರುವ ನೀನಾಸಮ್ ಮುಖ್ಯಸ್ಥರಾಗಿರುವ ಅಕ್ಷರ ನವದೆಹಲಿಯ ರಾಷ್ಟ್ರೀಯ ರಂಗ ಶಾಲೆಯ ವಿದ್ಯಾರ್ಥಿಯಾಗಿದ್ದವರು. ಮುಂದೆ ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸಿ ಹೆಗ್ಗೋಡಿಗೆ ಮರಳಿ ರಂಗಭೂಮಿಯ ಸಾಧ್ಯತೆಗಳನ್ನು ಶೋಧಿಸುತ್ತಿರುವವರು. ದೃಶ್ಯ ಸಂಸ್ಕೃತಿಯ ಎಲ್ಲಾ ಮಜಲುಗಳಲ್ಲಿ ಆಸಕ್ತರಾಗಿರುವ ಅಕ್ಷರ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ ಪಡೆದಿದ್ದಾರೆ.

 

ಪ್ರಶಾಂತ್ ಪಂಡಿತ್

ಅತಿಥಿ ಉಪನ್ಯಾಸಕರು

ಹದಿನೈದು ವರ್ಷಕ್ಕೂ ಮಿಕ್ಕು ಐ.ಟಿ ಸಂಶೋಧನಾ ವಿಭಾಗದಲ್ಲಿ ಕೆಲಸ ಮಾಡಿದ ಇವರು, ಆಸಕ್ತಿಯಿಂದ ಚಲನಚಿತ್ರ ಮಾಧ್ಯಮಕ್ಕೆ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡವರು. ೨೦೦೧ರಿಂದ ತೊಡಗಿ ಅನೇಕ ಜಾಹಿರಾತುಗಳು, ಸಾಕ್ಷ್ಯಚಿತ್ರಗಳು, ಕಿರುಚಿತ್ರಗಳ ನಿರ್ಮಾಣ, ಸಂಕಲನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಂಕಲನ, ಧ್ವನಿ ಬಳಕಾ ವಿಜ್ಞಾನಗಳಲ್ಲಿ ಇವರಿಗೆ ವಿಶೇಷವಾದ ಪರಿಶ್ರಮವಿದೆ. ಲೇಸ್‌ಚಿತ್ರ ಸಮುದಾಯ ಸೇರಿದಂತೆ ಅನೇಕ ಚಿತ್ರ ಸಮುದಾಯಗಳಲ್ಲಿ ವಿವಿಧ ಹಂತಗಳಲ್ಲಿ ಕೆಲಸ ಮಾಡಿದ ಅನುಭವದೊಂದಿಗೆ ಅನೇಕ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವಗಳಿಗೆ ದುಡಿದ ಅನುಭವವೂ ಇದೆ. ಡಿಜಿಟಲ್ ಚಿತ್ರ ನಿರ್ಮಾಣದ ಸಂದರ್ಭದಲ್ಲಿ ಅದರ ಹಿಂದಿನ ತಾಂತ್ರಿಕತೆಯ ಕುರಿತಾದ ವಿಶೇಷ ಅನುಭವವನ್ನು ಇವರು ಪಡೆದಿದ್ದಾರೆ.

 

ವಿಷ್ಣು ಪ್ರಸಾದ್
ಅತಿಥಿಉಪನ್ಯಾಸಕರು

ಕನ್ನಡದ ಪ್ರಮುಖ ಛಾಯಾಗ್ರಾಹಕರಲ್ಲಿ ಒಬ್ಬರಾಗಿದ್ದ ಎಸ್. ರಾಮಚಂದ್ರ ಅವರ ಶಿಷ್ಯರಾಗಿದ್ದು ಅವರಿಂದ ಛಾಯಾಗ್ರಹಣದ ಕಲೆಯನ್ನು ಕಲಿತಿರುವ ವಿಷ್ಣು ಪ್ರಸಾದ್ ಸ್ವತಂತ್ರವಾಗಿ ಪಿ. ಶೇಷಾದ್ರಿ ನಿರ್ದೇಶನದ ದೈನಿಕ ದಾರವಾಹಿ ಚಕ್ರತೀರ್ಥಕ್ಕೆ ಛಾಯಾಗ್ರಾಹಕರಾಗಿ ದುಡಿದಿದ್ದಾರೆ. ಅವರ ಛಾಯಾಗ್ರಹಣದ ಬಣ್ಣದ ಕೊಡೆ ಚಿತ್ರವೂ ಇವರಿಗೆ ಸಾಕಷ್ಟು ಹೆಸರನ್ನು ತಂದಿತ್ತಿದೆ. ಇದಲ್ಲದೇ ವಿಷ್ಣು ಪ್ರಸಾದ್ ಅನೇಕ ಸಾಕ್ಷ್ಯಚಿತ್ರಗಳಲ್ಲಿ ವ್ಯಸ್ತರಾಗಿದ್ದಾರೆ.

 

ಓಂಶಿವಪ್ರಕಾಶ್

ಅತಿಥಿಉಪನ್ಯಾಸಕರು

ಕನ್ನಡದಲ್ಲಿ ತಂತ್ರಜ್ಞಾನದ ಕುರಿತು ಬ್ಲಾಗ್ ಬರಹಗಾರರಲ್ಲಿ ಅಗ್ರಗಣ್ಯರು. ಕನ್ನಡ ವೀಕಿಪೀಡಿಯಾದ ನಿರ್ಮಾಣ, ಸಂಪಾದನದಲ್ಲಿ ಪ್ರಮುಖರು. ಕನ್ನಡದಲ್ಲಿ ತಂತ್ರಜ್ಞಾನ ಸಂಬಂಧೀ ಚಟುವಟಿಕೆಗಳಿಗಾಗಿ ಸಮುದಾಯಗಳನ್ನು ಕಟ್ಟುವ, ಉಚಿತ ಹಾಗೂ ಮುಕ್ತ ಜ್ಞಾನ ಸಂಗ್ರಹಗಳನ್ನು ನಿರ್ಮಾಣ ಮಾಡುವಲ್ಲಿ, ಅದಕ್ಕಾಗಿ ಸಮುದಾಯಗಳನ್ನು ಮುನ್ನಡೆಸುವುದರಲ್ಲಿ ಅಪಾರ ಪರಿಶ್ರಮ ಹೊಂದಿದವರು. ಸಂಚಯ ಹಾಗೂ ಕನ್ನಡ ಸಂಚಯದ ಸದಸ್ಯರು. ಸಾಹಿತ್ಯ, ಛಾಯಾಗ್ರಹಣ, ಚಾರಣ ಹಾಗೂ ಸೈಕಲಿಂಗ್ ಇವರ ಇತರ ಆಸಕ್ತಿಯ ಕ್ಷೇತ್ರಗಳು.

ಕಾರ್ಯಾಗಾರದ ರೂಪರೇಷೆ

೨ ಮಾರ್ಚ್ ೨೦೧೬ರಿಂದ ಆರಂಭವಾಗುವ ಚಲನಚಿತ್ರ ನಿರ್ಮಾಣಕಾರ್ಯಾಗಾರವು ೭ ಮಾರ್ಚ್ ೨೦೧೬ರ ರಾತ್ರಿಯವರೆಗೂ ಹೆಗ್ಗೋಡಿನಲ್ಲಿರುವ ನೀನಾಸಮ್‌ನಲ್ಲಿ ನಡೆಯಲಿದೆ. ಪ್ರತಿ ದಿನ ಬೆಳಗ್ಗೆ ಏಳರಿಂದ ರಾತ್ರಿಯ ೧೧ ಗಂಟೆಯವರೆಗೂ ಅನೇಕ ಚಟುವಟಿಕೆಗಳನ್ನು ಯೋಜಿಸಲಾಗಿದ್ದು, ಇದುಆಸಕ್ತರಿಗಾಗಿ ವಿಶೇಷವಾಗಿ ರೂಪಿಸಲಾಗಿರುವ ತೀವ್ರತರವಾದ ಕಾರ್ಯಾಗಾರವಾಗಿದೆ. ಈ ಕಾರ್ಯಾಗಾರಕ್ಕೆ ಕನಿಷ್ಟ ಹದಿನೈದು ದಿನ ಮುಂಚಿತವಾಗಿಯೇ, ಅನೇಕ ಓದುವ ಸಾಮಗ್ರಿಗಳನ್ನು, ನೋಡಬೇಕಾದ ಸಿನೆಮಾಗಳನ್ನು ಆಯ್ಕೆಯಾದ ಕಾರ್ಯಾಗಾರ ಭಾಗಿಗಳಿಗೆ ಇ-ಮೇಲ್ ಮೂಲಕ ತಿಳಿಸಲಾಗುತ್ತದೆ. ಹೀಗಾಗಿ ಕಾರ್ಯಾಗಾರದ ಮೊದಲೂ ಒಂದಷ್ಟು ತಯಾರಿಗಳನ್ನು ಮಾಡಿಕೊಳ್ಳಲು ಭಾಗಿಗಳು ಸಿದ್ಧರಿರಬೇಕಾಗುತ್ತದೆ. ಕಾರ್ಯಾಗಾರವು ಡಿಜಿಟಲ್ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತನ್ನು ನೀಡಲಿದ್ದು, ಹೊಸ ತಲೆಮಾರಿನ ವ್ಯಾಕರಣ ಚಿಂತನೆಗೆ ವಿಶೇಷವಾಗಿ ಆಸಕ್ತವಾಗಿದೆ. ಈ ಕಾರ್ಯಾಗಾರದ ಭಾಗಿಗಳನ್ನು ನಾಲ್ಕು ತಂಡಗಳನ್ನಾಗಿ ರೂಪಿಸಲಿದ್ದು ಆ ನಾಲ್ಕು ತಂಡಗಳು ಸ್ವತಂತ್ರವಾಗಿ ಒಂದೊಂದು ಕಿರುಚಿತ್ರವನ್ನು ಈ ಕಾರ್ಯಾಗಾರದಲ್ಲಿ ನಿರ್ಮಿಸಬೇಕಾಗಿರುತ್ತದೆ. ಇದಕ್ಕೆ ಕಾರ್ಯಾಗಾರದಲ್ಲಿ ಇರುವ ಅತಿಥಿ ಉಪನ್ಯಾಸಕರು ಮಾರ್ಗದರ್ಶಕರಾಗಿರುತ್ತಾರೆ.

ಕಾರ್ಯಾಗಾರದ ಶುಲ್ಕ

ಕಾರ್ಯಾಗಾರದ ವೆಚ್ಚವಾಗಿ ಅಭ್ಯರ್ಥಿಗಳು ತಲಾ ೨೦೦೦೦ ರೂಪಾಯಿಗಳನ್ನು ಕೊಡಬೇಕಾಗುತ್ತದೆ. ಈ ಶುಲ್ಕದಲ್ಲಿ ಅಭ್ಯರ್ಥಿಗಳ ಕಾರ್ಯಾಗಾರ ಶುಲ್ಕ, ನೀನಾಸಂ, ಹೆಗ್ಗೋಡಿನಲ್ಲಿ ವಾಸ ಹಾಗೂ ಊಟದ ವ್ಯವಸ್ಥೆಗಳೂ ಸೇರಿರುತ್ತದೆ. ಕಾರ್ಯಾಗಾರದ ಜಾಗಕ್ಕೆ ಬರುವ ಹಾಗೂ ಹಿಂದಿರುಗುವ ವ್ಯವಸ್ಥೆ ಅಭ್ಯರ್ಥಿಗಳದ್ದೇ ಆಗಿರುತ್ತದೆ. (ಅದಕ್ಕೆ ಪೂರಕ ಮಾಹಿತಿಗಳನ್ನು ಕಾರ್ಯಾಗಾರ ಆಯೋಜಕರಿಂದ ಪಡೆಯಬಹುದಾಗಿದೆ.)

ಕಾರ್ಯಾಗಾರದಲ್ಲಿ ಭಾಗವಹಿಸುವ ಕ್ರಮ

ಕಾರ್ಯಾಗಾರದಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳಿಗೆ, ಅರ್ಜಿಗಳು ಸಂಚಿ ಸಂಸ್ಥೆಯ ಅಂತರ್ಜಾಲ ತಾಣದಲ್ಲಿ (www.sanchifoundation.com) ಲಭ್ಯವಿರುತ್ತದೆ.

ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ೧೦ ಫೆಬ್ರವರಿ ೨೦೧೬ ಆಗಿರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ೧೫ ಫೆಬ್ರವರಿ ೨೦೧ರ ಒಳಗೆ ಪ್ರಕಟಿಸಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಕಾರ್ಯಾಗಾರ ಶುಲ್ಕವನ್ನು ಭರಿಸಿ ತಮ್ಮ ಅಭ್ಯರ್ಥಿತನವನ್ನು ಖಚಿತಪಡಿಸಿಕೊಳ್ಳಬೇಕಿರುತ್ತದೆ. ತಪ್ಪಿದಲ್ಲಿ, ಕಾಯುವಿಕೆಯಲ್ಲಿ ಇರುವ ಮುಂದಿನ ಅಭ್ಯರ್ಥಿಗೆ ಈ ಅವಕಾಶವನ್ನು ವರ್ಗಾಯಿಸಲಾಗುತ್ತದೆ. ಆಯ್ಕೆಯ ಅಥವಾ ಆಯ್ಕೆ ಮಾಡದಿರುವ ಎಲ್ಲಾ ಹಕ್ಕುಗಳು ಆಯೋಜಕರದ್ದಾಗಿರುತ್ತದೆ.

ಸಂಪರ್ಕ ವಿಳಾಸ
NINASAM, Heggodu, Sagara, Shimoga, Karnataka 577 417
Tel: 08183 265646 | Fax: 08183 265476
Email ID: [email protected]
www.ninasam.org | www.sanchifoundation.com

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ.

ಸಂಚಿ ಫೌಂಡೇಷನ್ ಮಾಸಿಕ ಪತ್ರಿಕೆಗೆ ಚಂದಾದಾರರಾಗಿ‍

Opt for Sanchi Monthly News paper

ಸಂಚಿ ಫೌಂಡೇಷನ್ ಮಾಸಿಕ ಪತ್ರಿಕೆಗೆ ಚಂದಾದಾರರಾಗಿ‍

You have Successfully Subscribed!