ಸ್ವರಗಳ ದಾರಿಯ ನೆನಪು
ಬಿ ವಿ ಕಾರಂತರ ರಂಗಸಂಗೀತದ ಬಗೆಗಿನ ಆಕಾಶವಾಣಿ ರೂಪಕ ಸರಣಿಯು ರೂಪುಗೊಂಡದ್ದು ಎರಡು ಹಂತಗಳಲ್ಲಿ
ಮಂಗಳೂರು ಆಕಾಶವಾಣಿಯ ಡಾ. ಶರಭೇಂದ್ರಸ್ವಾಮಿಯವರಿಗೆ ರಂಗದಲ್ಲಿ ಹುಟ್ಟಿ ಅಲ್ಲೇ ಮರೆಯಾದ ಅಪಾರ ಕಾರಂತ ಹಾಡುಗಳಲ್ಲಿ ಕೆಲವನ್ನಾದರು ಮುಂದಿನ ತಲೆಮಾರಿಗೆ ಉಳಿಸಬೇಕೆಂದು ಕನಸು. ಇದಕ್ಕಾಗಿ ಹಾಡುಗಾರರ ಒಂದು ಗುಂಪನ್ನು ಸಿದ್ಧಪಡಿಸಿ ಕಲ್ಪನಾ ನಾಗನಾಥ್ ರಿಂದ ತರಬೇತಯನ್ನು ಕೊಡಿಸಲಾಯಿತು. ಮಂಗಳೂರು ಆಕಾಶವಾಣಿಯಲ್ಲಿ ನಡೆದ ಕಾರಂತ ರಂಗಸಂಗೀತ ಕಮ್ಮಟದಲ್ಲಿ ಗಜಾನನ ನಾಯಕ್ ಹಾರ್ಮೋನಿಯಂ ಬಲವಾಗಿ ಒದಗಿದರು. ಇದುವರೆಗೆ ದಾಖಲಾಗದಿದ್ದ ಹತ್ತಾರು ಅಪ್ರಚಲಿತ ಹಾಡುಗಳು ಮಲ್ಟಿಟ್ರಾಕ್ ನಲ್ಲಿ ಧ್ವನಿಮುದ್ರಣಗೊಂಡು ಆಕಾಶವಾಣಿಯ ಭಂಡಾರ ಸೇರಿದುವು. ನಾಗಾಭರಣ ಮತ್ತು ಜೀವನರಾಂ ಸುಳ್ಯ ಬೆಂಬಲಕ್ಕೆ , ರಫೀಖ್ ಖಾನ್ ಅವರು ತಾಂತ್ರಿಕ ಸಹಾಯಕ್ಕೆ ಇದ್ದರು. ಈ ಕಾರಂತಕಮ್ಮಟದಲ್ಲಿ ಮರುನಿರ್ಮಾಣಗೊಂಡ ಹಾಡುಗಳನ್ನು ಶಿಬಿರಾರ್ಥಿಗಳ ತಂಡವು ವೇದಿಕೆಯಲ್ಲಿ ಪ್ರಸ್ತುತಪಡಿಸಿತು. ಹಾಡುಗಳ ನಡುವಿನ ನಿರೂಪಣೆಯ ನಟ ನಟಿಯರಾಗಿ ಬಂದವರು ಚಂದ್ರಹಾಸ ಉಳ್ಳಾಲ್ ಮತ್ತು ಮಂಜುಳಾ ಸುಬ್ರಹ್ಮಣ್ಯ. ನಿರೂಪಣಾ ಸಾಹಿತ್ಯ ಸಿದ್ಧಪಡಿಸಿದವರು ಡಾ. ಮಹಾಲಿಂಗ ಭಟ್. ಕೆ
ಮುಂದೆ ಕೆಲವು ತಿಂಗಳ ಬಳಿಕ ಇದರ ವಿಸ್ತರಣೆಯಾಗಿ ಆದುದು ಈ ನಾದಮಂಚ ಕಾರ್ಯಕ್ರಮ. ಕನ್ನಡ ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಪ್ರತಿ ಗುರುವಾರ ಬೆಳಗ್ಗೆ ರಾಜ್ಯವ್ಯಾಪಿ ಪ್ರಸಾರದಲ್ಲಿ ಏಕಕಾಲಕ್ಕೆ ಆಕಾಶಕ್ಕೆ ಹಬ್ಬಿಸಲು ಹನ್ನೆರಡು ರೂಪಕಗಳನ್ನು ಸಿದ್ದಪಡಿಸಲಾಯಿತು. ರೂಪಕದ ವಿನ್ಯಾಸಕ್ಕೆ ಹೊಂದಿಕೊಳ್ಳುವ ಅರ್ಥಪೂರ್ಣ ಹಾಡುಗಳನ್ನು ಮತ್ತು ಅಪೂರ್ವ ಧ್ವನಿಗಳನ್ನು ಆರಿಸಿ, ಕಾರಂತರ ಬಗೆಗಿನ ಮಾಹಿತಿ ಮತ್ತು ಒಳನೋಟಗಳ ಶೋಧವನ್ನು ನಡೆಸಿ ಸಾಹಿತ್ಯ ಬರೆದವರು ಡಾ. ಮಹಾಲಿಂಗ ಭಟ್.ಕೆ. ನಾದಮಂಚದ ಮುಖ್ಯ ನಿರೂಪಣೆಯನ್ನು ಮಾಡಿ ಕಾರ್ಯಕ್ರಮ ನಿರ್ಮಾಣದ ರೂವಾರಿಯಾದವರು ಡಾ. ಶರಭೇಂದ್ರ ಸ್ವಾಮಿ. ಜೊತೆಗೆ ದನಿಕೊಟ್ಟವರು ಮಂಜುಳಾ ಸುಬ್ರಹ್ಮಣ್ಯ
ಬಿ.ವಿ. ಕಾರಂತರ ಲಭ್ಯ ಹಾಡುಗಳು, ಆಕಾಶವಾಣಿ ಸಂದರ್ಶನಗಳು, ಚಲನಚಿತ್ರ ಸಿ ಡಿ ಗಳು, ಖಾಸಗಿ ಧ್ವನಿ ಮುದ್ರಣಗಳು, ಮಂಗಳೂರು ಆಕಾಶವಾಣಿಯ ಕಮ್ಮಟದಲ್ಲಿ ದಾಖಲಾದ ಹಾಡುಗಳು ಎಲ್ಲವನ್ನು ಒಟ್ಟುಹಾಕಲಾಯಿತು. ಕಾರಂತರ ಮೇಲಿನ ಬಹುಪಾಲು ಕನ್ನಡ, ಇಂಗ್ಲಿಷ್, ಹಿಂದಿ ಗ್ರಂಥಗಳನ್ನು ಸಂಗ್ರಹಿಸಿ ಆಧಾರ ಸಾಮಗ್ರಿಯಾಗಿ ಬಳಸಲಾಯಿತು. ಹೀಗೆ ಸಂಶೋಧನಾತ್ಮಕ ದೃಷ್ಟಿ ಮತ್ತು ಸಾಮಾನ್ಯ ಕೇಳುಗರಿಗಾಗಿ ಅಗತ್ಯ ಬೇಕಾದ ಸರಳತೆ ಎರಡನ್ನು ಬೆಸೆಯುವ ಸವಾಲು ಬರವಣಿಗೆಯ ಹಂತದಲ್ಲಿತ್ತು. ಕಾರಂತರ ಬಗ್ಗೆ ದಕ್ಕಿದ್ದ ಸಾಮಗ್ರಿಗಳು ಎಷ್ಟಿತ್ತೆಂದರೆ ಹನ್ನೆರಡು ನಿಮಿಷ ಸಮಯ ವ್ಯಾಪ್ತಿಯ ಹನ್ನೆರಡು ಕಂತುಗಳು ಅವಕ್ಕೆ ಏನೇನು ಸಾಲದಾಗುವಷ್ಟು.
ಬಿ. ವಿ. ಕಾರಂತರ ಬದುಕು, ಸ್ವರವಿನ್ಯಾಸದ ಮೇಲಿನ ಅವರ ಮೀಮಾಂಸೆ ಎರಡೂ ಒಟ್ಟಾಗಿ ರೂಪಕಸರಣಿಯಲ್ಲಿ ಬರಬೇಕು. ಅವರ ನಿರ್ದೇಶನದ ಹೊಳಹು ಕೊಂಚವಾದರು ಸಿಗಬೇಕು, ಸಾಕಷ್ಟು ಹಾಡುಗಳನ್ನು ಕೇಳಲು ಆಗಬೇಕು, ಈ ರಂಗಘರಾನಾದ ರಸಗ್ರಹಣವು ಸಾಧ್ಯವಾಗಬೇಕು, ಅಲ್ಲದೆ ಇಡಿಯ ಕಾರ್ಯಕ್ರಮದಲ್ಲಿ ಬಳಸುವ ಪ್ರತಿಯೊಂದು ಸಂಗೀತ ತುಣುಕು ಕಡ್ಡಾಯವಾಗಿ ಕಾರಂತ ಸೃಷ್ಟಿಯು ಆಗಿರಬೇಕು. ಇಷ್ಟು ಕಟ್ಟುಪಾಡು ಇರಿಸಿಕೊಂಡೆ ಕೆಲಸಕ್ಕೆ ಇಳಿಯಲಾಯಿತು.
ಕಾರಂತರ ಸ್ವರಶೋಧ ಪ್ರಕ್ರಿಯೆಯ ಮೂಲಗುರು ಜಾನ್ ಕೇಜ್ ನ ಮಾಹಿತಿ, ಚಲನಚಿತ್ರಕ್ಕೆ ಕಾರಂತರು ಕೊಟ್ಟ ಸಂಗೀತದ ವಿಶೇಷತೆ, ತಮ್ಮ ಬಗ್ಗೆ ತಾವೇ ಹೇಳಿಕೊಂಡ ರಂಗಜಂಗಮನ ನುಡಿಗಳು, ಸರಳವೂ ಸಂಕೀರ್ಣವೂ ಏಕಕಾಲಕ್ಕೆ ಆಗಿರುವ ಈ ವಿಶಿಷ್ಟ ಸಂಗೀತದ ಮರುಸೃಷ್ಟಿಯಲ್ಲಿ ಎದುರಾಗುವ ಸವಾಲು – ಹೀಗೆ ಕಾರಂತಘರಾನಾದ ಹಲವು ಮುಖಗಳನ್ನು ತರಲು ಯತ್ನಿಸಲಾಯಿತು.
ಇಲ್ಲಿ ಕಾರಂತರೇ ಹಾಡಿದ, ಕಾರಂತರ ಶಿಷ್ಯ ಸಮೂಹವು ಅನುಸರಿಸಿದ, ಹವ್ಯಾಸಿಗಳು ಹಸಿಯಾಗಿ ಹಾಡಿದ ಎಲ್ಲ ಬಗೆಯ ಗೀತೆಗಳನ್ನು ಬಳಸಲಾಗಿದೆ. ಇತರ ಭಾಷೆಯ ಕಾರಂತ ರಂಗಗೀತೆಗಳು, ಕನ್ನಡದಲ್ಲಿ ಅವರು ಕಟ್ಟಿದ ಅಪಾರ ಹಾಡುಗಳು ಇನ್ನೂ ನಮಗೆ ದಕ್ಕದೆ ಉಳಿದಿವೆ. ಸಿಕ್ಕಿದ್ದರಲ್ಲಿಯು ಅಳವಡಿಸಲಾಗದೆ ಬಿಟ್ಟದ್ದು ಸಾಕಷ್ಟು ಇದೆ. ಈ ಮಿತಿಯ ಮಧ್ಯೆಯು ಬಿ. ವಿ. ಕಾರಂತರ ಬಗ್ಗೆ ಸರಣಿಯೊಂದು ಸಾಧ್ಯವಾಯಿತು ಎಂಬುದೆ ಸಂತೋಷ.
ಇದನ್ನು ಈಗ ಸಂಗ್ರಹಿಸಿ ಸಂಚಿಯ ಮೂಲಕ ಮತ್ತೊಮ್ಮೆ ಕೇಳುಗರಿಗೆ ಒದಗಿಸಲಾಗುತ್ತಿದೆ.
Your Voice