ಮಂಟಪ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ ಪ್ರದರ್ಶನಕ್ಕೆ ಸಾವಿರ ಸಂಭ್ರಮ ನಡೆದಿದ್ದ ಸಂದರ್ಭದಲ್ಲಿ, ಅವರ ಪ್ರದರ್ಶನದ ದಾಖಲೆಯಾಗಿದೆಯೇ ಇಲ್ಲವೇ? ಇಂಥದ್ದೊಂದು ದಾಖಲೆ ಬೇಕಲ್ಲವೇ? ಎಂದು ಯೋಚನೆ ತಲೆಯಲ್ಲಿ ಕೊರೆಯಲಾರಂಭಿಸಿತು. ಅವರನ್ನು ಒಂದೆರಡು ಬಾರಿ ಭೇಟಿ ಮಾಡಿಯಷ್ಟೇ ಗೊತ್ತಿತ್ತು. ಅಂಥಾ ದೊಡ್ಡ ಕಲಾವಿದರಿಗೆ ನೇರ ದೂರವಾಣಿಸುವಷ್ಟು ಸಲುಗೆ ನನಗಿರಲಿಲ್ಲ. ಆದರೆ ಮಂಗಳೂರಿನಲ್ಲಿರುವ ಅವರ ತಮ್ಮ ಮನೋಹರರು ನನಗೆ ಹತ್ತಿರವಾಗಿದ್ದರಿಂದ ಅವರಲ್ಲಿ ನನ್ನ ತಲೆಯಲ್ಲಿನ ಪ್ರಶ್ನೆಯನ್ನು ಕೇಳಿದೆ. “ಅಂಥದ್ದೇನೂ ದಾಖಲೆಯಾಗಿದ್ದು ನೆನಪಿಲ್ಲ, ಅವನಿಗೇ ನಿಮಗೆ ಕಾಲ್ ಮಾಡೋದಿಕ್ಕೆ ಹೇಳ್ತೇನೆ ಎಂದರು!” ಮಂಟಪ ಪ್ರಭಾಕರ ಉಪಾಧ್ಯರು ಕರೆ ಮಾಡಿಯೇ ಬಿಟ್ಟರು! ನನ್ನ ಯೋಚನೆಗೆ ಅವರು ಭುಜಕೊಟ್ಟು ನಿಂತರು.

ಹತ್ತು ವರುಷಗಳ ಹಿಂದೆ ಗಣೇಶರು ಹಾಗೂ ಪ್ರಭಾಕರರು ಸೇರಿ ಇಂಥದ್ದೊಂದು ಪ್ರಯೋಗ ಆರಂಭಿಸಿದರು. ಇಡೀ ಪ್ರದರ್ಶನದ ಕಲ್ಪನೆ, ರಚನೆ, ನಿರ್ದೇಶನ, ಶತಾವಧಾನೀ ಆರ್. ಗಣೇಶರದ್ದು. ಅದಕ್ಕೆ ನೃತ್ಯ ನಿರ್ದೇಶನವನ್ನು ಮಾಡಿ ಕುಣಿದವರು ಪ್ರಭಾಕರರು. ಹೀಗೆ ಭಾಮಿನಿ ಎಂಬ ಮೊದಲ ಕೃತಿಯಲ್ಲಿ ಆರಂಭವಾದ ಇವರ ಯಾತ್ರೆ, ಕೃಷ್ಣಾರ್ಪಣ, ಯಕ್ಷದರ್ಪಣ, ವೇಣುವಿಸರ್ಜನ, ಮಾಯಾ ಶೂರ್ಪನಖಿ, ಜಾನಕೀ ಜೀವನ, ಯಕ್ಷನವೋದಯ, ಪ್ರಣಯವಂಚಿತೆ, ದಾಸದೀಪಾಂಜಲಿ ಹೀಗೆ ಅನೇಕ ಪ್ರಸಂಗಗಳ ಮೂಲಕ ಬೆಳೆಯುತ್ತಾ ಸಾಗಿತು. ಆದರೆ ಭಾಮಿನಿ ಎನ್ನುವುದು ಇವೆಲ್ಲವುಗಳ ಮೂಲ ಹಾಗೂ ಪರಿಪೂರ್ಣ ಎಂದು ಪ್ರಭಾಕರ ಹಾಗೂ ಗಣೇಶರ ಹೇಳಿಕೆ.

ಇತ್ತೀಚೆಗಷ್ಟೇ ಮದುವೆಯಾಗಿರುವ ಹೆಣ್ಣೊಬ್ಬಳನ್ನು ನಾಯಕಿಯನ್ನಾಗಿ ಇಟ್ಟುಕೊಂಡು, ಯಾತ್ರೆಗೆ ಹೋಗಿರುವ ಗಂಡನನ್ನು ಮನಸಲ್ಲಿ ಚಿತ್ರಿಸಿಕೊಂಡು, ನಾಯಕಿಯ ಭಾವಗಳ ಮೂಲಕ ಭಾಮಿನಿಯ ಕಥನ ಸಾಗುತ್ತದೆ. ಮಾನವ ಜೀವನದ ಎಲ್ಲಾ ಭಾವಗಳನ್ನು ವರ್ಣಿಸುವುದೇ ಭಾಮಿನಿಯ ಅಷ್ಟ ನಾಯಕಿಯರ ಗುಣ. ಭಾವಗಳು ಒಂದೇ ಆದರೆ ಸಮಯ ಸಂದರ್ಭಗಳಿಗೆ ತಕ್ಕಂತೆ ಅವುಗಳು ರೂಪಪಡೆಯುತ್ತವೆ ಎನ್ನುತ್ತದೆ ಭಾಮಿನಿ. ಮಂಟಪ ಪ್ರಭಾಕರರ ಪ್ರದರ್ಶನದಲ್ಲಿ ನಿತ್ಯ ಜೀವನದಿಂದ ಆಯ್ದು, ಪೋಣಿಸಿದ ಅಮೂಲ್ಯ ದರ್ಶನಗಳಿವೆ, ಗಣೇಶರ ಸಾಹಿತ್ಯದಲ್ಲಿ ನೃತ್ಯಶಾಸ್ತ್ರದ ಚೌಕಟ್ಟಿನೊಳಗೆ ನೃತ್ಯಕ್ಕೆ ಮಾರ್ಗದರ್ಶನವಿದೆ, ಗಣಪತಿ ಭಟ್ಟರ ಹಾಡುಗಾರಿಕೆಯಲ್ಲಿ, ಕಾಲಮಾನಕ್ಕೆ ತಕ್ಕ ರಾಗ ಸಂಯೋಜನೆಯಿದೆ, ಪಾಠಕರು ಮದ್ದಳೆಯಿಂದ ಹಾಗೂ ಕೃಷ್ಣಯಾಜಿಯವರು ಚೆಂಡೆಯಿಂದ ಸಂಗೀತಕ್ಕೆ ಸಾಥಿಯಾಗುತ್ತಾರೆ. ಹೀಗೆ ಒಂದು ಯಕ್ಷಗಾನದ ಅಪರೂಪದ ಪ್ರದರ್ಶನ ರೂಪುಗೊಂಡಿದೆ. ಇದನ್ನು ದಾಖಲಾತಿಸುವ ಹುಮ್ಮನಸ್ಸು ಸ್ವತಃ ಪ್ರಭಾಕರ ಉಪಾಧ್ಯರ ಪ್ರೋತ್ಸಾಹದಿಂದ ನೂರ್ಮಡಿಯಾಯಿತು.

ಚಿತ್ರರಂಗದ ಸ್ನೇಹಿತರಾದ ಮೀಡಿಯಾ ಹೌಸ್ ಸ್ಟೂಡಿಯೋದ ಬಿ. ಸುರೇಶ ಹಾಗೂ ಶೈಲಜಾ ನಾಗ್ ಈ ದಾಖಲಾತಿಗೆ ಬೇಕಾದ ಸ್ಥಳಾವಕಾಶ, ಉಪಕರಣಗಳನ್ನು ಒದಗಿಸಿ ಸಹಕರಿಸಿದರು. ಗೆಳೆಯರಾದ ವಿಜಯ್ ಕುಮಾರ್ ತಮ್ಮ ಸ್ಟೂಡಿಯೋದಲ್ಲಿ ವಿಶೇಷ ಧ್ವನಿ ಮುದ್ರಣ, ಮಿಶ್ರಣದ ನೆರವನ್ನು ಒದಗಿಸಿದರು. ಯಕ್ಷಗಾನ ದಾಖಲೀಕರಣದಲ್ಲೇ ಪ್ರಥಮ ಬಾರಿಗೆ ನಾವು ಈ ಡಿ.ವಿ.ಡಿಯಲ್ಲಿ ಭಾಮಿನಿ ಪ್ರಯೋಗವನ್ನೂ, ಮತ್ತು ಪ್ರಯೋಗದುದ್ದಕ್ಕೂ ಆರ್. ಗಣೇಶರ ಅರ್ಥವಿವರಣೆಯನ್ನೂ ಜೋಡಿಸುವಂಥಾ ಕೆಲಸವನ್ನು ಮಾಡಿದ್ದೇವೆ. ಇದು ಯಕ್ಷಗಾನಾಸಕ್ತರಿಗೆ ಮೊದಲ ಬಾರಿಗೆ ದೊರೆಯುತ್ತಿರುವ ಅನುಭವವಾಗಿರುತ್ತದೆ. ಇದರಿಂದ ಭಾಮಿನಿ ಪ್ರಯೋಗವನ್ನು ಅನುಭವಿಸುವುದು ಮಾತ್ರವಲ್ಲ, ಒಂದು ಗಹನವಾದ ಸಾಹಿತ್ಯಿಕ ಚರ್ಚೆಗೂ ಇದು ಎಡೆ ಮಾಡುತ್ತದೆ ಎಂದು ನಾವು ನಂಬಿದ್ದೇವೆ. ಹೀಗೆ ಸುಮಾರು ಒಂದು ತಿಂಗಳ ಕೆಲಸದಿಂದ ಭಾಮಿನಿಯ ನಮ್ಮ ಡಿ.ವಿ.ಡಿ ತಯಾರಾಗಿದೆ. ಈ ಡಿ.ವಿ.ಡಿಯನ್ನು ನೋಡಲಿಚ್ಚಿಸುವ ಆಸಕ್ತರು ಸ್ವತಃ ಮಂಟಪ ಪ್ರಭಾಕರ ಉಪಾಧ್ಯರನ್ನು ಈ ಕೆಳಗಿನ ವಿಳಾಸದಲ್ಲಿ ಸಂಪರ್ಕಿಸಬಹುದು.

# 4, Mantap Ice Cream, K. G Circle, Bangalore 560009
Ph: +91-9449823232 / +91-80-23562251
email: [email protected]
Visit: www.mantapupadhya.com