ಬೆಂಗಳೂರಿನ ಕೆರೆಗಳನ್ನು ನುಂಗಿ ತಲೆಯೆತ್ತಿರುವ ಬಡಾವಣೆಗಳಲ್ಲಿ ಸಣ್ಣ ಮಳೆ ಬಂದರೂ ನೆರೆ ಹಾವಳಿ. ಇನ್ನೂ ಬದುಕುಳಿದಿರುವ ಕೆಲವು ಕೆರೆಗಳಲ್ಲೀಗ ನೊರೆ ಹಾವಳಿ. ಬೆಂಗಳೂರು ವಿಶಿಷ್ಟ ನಗರ. ಇದು ದೊಡ್ಡ ನದಿಯ ದಂಡೆಯ ಮೇಲಿಲ್ಲ. ಹಾಗೆಯೇ ಇದು ಕಡಲ ಕಿನಾರೆಯಲ್ಲಿರುವ ನಗರವೂ ಅಲ್ಲ. ಅದಕ್ಕಿಂತ ಹೆಚ್ಚಾಗಿ ಇದೊಂದು ಬೃಹತ್ ಸರೋವರವಿರುವ ನಗರವೂ ಇಲ್ಲ. ಆದರೆ ಇದು ಅಸಂಖ್ಯಾತ ಸಣ್ಣ, ದೊಡ್ಡ ಕೆರೆಗಳಿದ್ದ ನಗರ. ಬೆಂಗಳೂರಿನ ದಾಹವನ್ನು ಸದಾ ಪರಿಹರಿಸುತ್ತಿದ್ದದ್ದು ಕೆರೆಗಳೇ. ಆಧುನಿಕವಾಗುತ್ತಾ ಹೋದ ಬೆಂಗಳೂರು ಕೆರೆಗಳನ್ನೆಲ್ಲಾ ನುಂಗಿತು. ಅದರೊಂದಿಗೆ ಬೆಂಗಳೂರಿನ ನೀರಿನ ಸಮಸ್ಯೆ ಹೆಚ್ಚು ಸಂಕೀರ್ಣವಾಯಿತು. ಕಾವೇರಿಯಿಂದ ಇನ್ನಷ್ಟು ನೀರು ತರಲು ಸಾಧ್ಯವಿಲ್ಲದ ಸ್ಥಿತಿ ಇದೆ. ಬದುಕಿರುವ ಕೆರಗಳಲ್ಲೀಗ ನೊರೆ-ಹಾವಳಿ. ಬೆಂಗಳೂರಿನ ನೀರಿನ ಸಮಸ್ಯೆಯ ಮುನ್ನೆಲೆಯಲ್ಲಿ ಬಯಲು ಸೀಮೆಯ ದಾಹದ ಕಾರಣಗಳನ್ನು ಶೋಧಿಸುವ ಪ್ರಯತ್ನವೊಂದನ್ನು ಇಬ್ಬರು ಕನ್ನಡಿಗ ಭೂ ವಿಜ್ಞಾನಿಗಳು ನಡೆಸಿದ್ದಾರೆ. ‘ಸಂಚಿ’ ಅವರ ಮಾತುಗಳನ್ನು ದಾಖಲಿಸಿ ನಿಮ್ಮ ಮುಂದಿಡುತ್ತಿದೆ.

ನಾಗೇಶ್ ಹೆಗಡೆ ಭೂ ವಿಜ್ಞಾನವನ್ನು ಅಧ್ಯಯನ ಮಾಡಿದವರು. ಆದರೆ ಅವರ ಆಸಕ್ತಿ ಮತ್ತು ಕೆಲಸದ ಕ್ಷೇತ್ರ ಅದರಾಚೆಗೂ ವಿಸ್ತರಿಸಿಕೊಂಡಿದೆ. ಅಂಕಣ ಬರೆವಣಿಗೆಯಿಂದ ಪರಿಸರ ಹೋರಾಟದ ತನಕ ಅವರ ಕಾರ್ಯಕ್ಷೇತ್ರವಿದೆ. ಟಿ.ಆರ್.ಅನಂತರಾಮು ಭೂ ವಿಜ್ಞಾನವನ್ನು ಅಧ್ಯಯನ ಮಾಡಿ ಭಾರತೀಯ ಭೂ ವಿಜ್ಞಾನ ಸರ್ವೇಕ್ಷಣಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದವರು. ಆದರೆ ನಿವೃತ್ತಿಯ ನಂತರವೂ ವಿಜ್ಞಾನ ಬರೆವಣಿಗೆಯ ತಮ್ಮ ಪ್ರವೃತ್ತಿಯಲ್ಲಿ ಹೆಚ್ಚಿನ ಮಟ್ಟಿಗೆ ತೊಡಗಿಸಿಕೊಂಡವರು. ಈ ಇಬ್ಬರೂ ತಜ್ಞರು ಬೆಂಗಳೂರಿನ ಜಲ ಮೂಲದ ಸಮಸ್ಯೆಯನ್ನು ತಮ್ಮದೇ ಆದ ದೃಷ್ಟಿಕೋನದಲ್ಲಿ ನೋಡುತ್ತಲೇ ಪರಿಹಾರಕ್ಕೆ ಅಗತ್ಯವಿರುವ ಸುಸ್ಥಿರ ಮಾರ್ಗಗಳಲ್ಲಿ ಒಂದಾಗುತ್ತಾರೆ.

ಸಂಚಿ ಫೌಂಡೇಶನ್ ಪ್ರಸ್ತುತ ಪಡಿಸುತ್ತಿರುವ ‘ಜ್ಞಾನ ಸರಣಿ’ ಉಪನ್ಯಾಸಗಳಲ್ಲಿ ಇದು ಮೂರನೆಯದ್ದು. ಸಂಚಿ ಫೌಂಡೇಶನ್‌ ಪಾರಂಪರಿಕ ಮತ್ತು ಸಮಕಾಲೀನ ಕಲೆ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಜ್ಞಾನ ಸಂಪತ್ತಿನ ದೃಶ್ಯ ಮತ್ತು ಶ್ರಾವ್ಯ ದಾಖಲೀಕರಣವನ್ನು ಲಾಭಾಪೇಕ್ಷೆಯಿಲ್ಲದೆ ಮಾಡುತ್ತಿದೆ.

ನೇತ್ರಾವತಿ ನದಿ ತಿರುವು ಯೋಜನೆಯನ್ನು ದಾಖಲೀಕರಿಸಲು ಸಂಚಿಗೆ ನಿಮ್ಮ ಸಹಾಯದ ಅಗತ್ಯವಿದೆ.

ನಮ್ಮ ರಾಜ್ಯದಲ್ಲಿ ಬರಪೀಡಿತ ಕ್ಷೇತ್ರಗಳಿಗೆ ನೀರೂಡಿಸಲು, ನೇತ್ರಾವತಿಯನ್ನು ತಿರುಗಿಸುವ ಒಂದು ಬೃಹತ್ ಯೋಜನೆ ನಡೆದಿದೆ. ಇದರ ಪರ-ವಿರೋಧ ಚರ್ಚೆಗಳೂ ಮಾಧ್ಯಮದಲ್ಲಿ, ಸಾಮಾಜಿಕ ತಾಣಗಳಲ್ಲಿ ನಡೆದಿದೆ. ಅನೇಕರು, ಕಾನೂನು ರೀತ್ಯಾ, ಚಳುವಳಿ ಮುಖೇನ ತಮ್ಮ ಅಭಿಪ್ರಾಯಗಳನ್ನು, ಪರ-ವಿರೋಧಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಚಿ, ನೇತ್ರಾವತಿ ನದಿಯ ದಡದಲ್ಲಿನ ಜೀವನ, ಜಲ ಸಂಸ್ಕೃತಿ, ಅಲ್ಲಿನ ಅಗತ್ಯಗಳು, ಪರಿಸ್ಥಿತಿಗಳು ಹಾಗೂ ನೇತ್ರಾವತಿ ತಿರುಗಿಸಿದರೆ ಅದು ಹೋಗಬೇಕಿರುವ ದಿಕ್ಕು, ದಾರಿ ಹಾಗೂ ಅಲ್ಲಿನ ಪರಿಸ್ಥಿತಿಗಳನ್ನು ದಾಖಲಿಸುತ್ತಿದೆ. ಈ ಯೋಜನೆಯ ಒಟ್ಟು ಪರಿಣಾಮ, ನಮ್ಮಲ್ಲಿನ ಜಲ ನಿರ್ವಹಣೆಯ ಚಿಂತನೆಗಳು ಇವೆಲ್ಲವನ್ನೂ ಅಡಕವಾಗಿಸಿಕೊಂಡ ಒಂದು ಸಾಕ್ಷ್ಯಚಿತ್ರ ನಿರ್ಮಾಣವನ್ನು ನಾವು ಮಾಡುತ್ತಿದ್ದೇವೆ. ಆಗಲೇ ಒಂದಷ್ಟು ಚಿತ್ರೀಕರಣ ನಡೆದಿದೆ. ಅದನ್ನು ಮುಂದುವರೆಸಲು ನಮಗೆ ಆರ್ಥಿಕ ಸಹಾಯದ ಅಗತ್ಯವಿದೆ. ಆರ್ಥಿಕ ಸಹಾಯವನ್ನು ನೀವು ಅಂತರ್ಜಾಲದ ಮೂಲಕವೇ ಕೊಡಬಹುದು. ಚೆಕ್ ಮೂಲಕ ಕೊಡುವಂತಿದ್ದರೆ, ನಿಮ್ಮ ಮೊಬೈಲ್ ಸಂಖ್ಯೆಯನ್ನು, ಇ-ಮೇಲ್ ವಿಳಾಸವನ್ನು ನಮಗೆ [email protected]  ವಿಳಾಸಕ್ಕೆ ಕಳುಹಿಸಿಕೊಡಿ, ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ.

Support Sanchi Foundation to Document “Netravathi River Diversion Project” impacts

ಸಂಚಿ ಫೌಂಡೇಷನ್ ಮಾಸಿಕ ಪತ್ರಿಕೆಗೆ ಚಂದಾದಾರರಾಗಿ‍

Opt for Sanchi Monthly News paper

ಸಂಚಿ ಫೌಂಡೇಷನ್ ಮಾಸಿಕ ಪತ್ರಿಕೆಗೆ ಚಂದಾದಾರರಾಗಿ‍

You have Successfully Subscribed!