‍ನೀನಾಸಮ್ ಪ್ರತಿಷ್ಠಾನ, ಹೆಗ್ಗೋಡು ಆಯೋಜಿಸಿರುವ

ಹೊಸಗನ್ನಡ ಕವಿತೆಗಳನ್ನಾಧರಿಸಿದ ಕಿರುಚಿತ್ರನಿರ್ಮಾಣ ಯೋಜನೆ

ಕಾವ್ಯ ಕನ್ನಡಿ

ಯೋಜನೆ‍‍ಯ ಬಗ್ಗೆ

ಹೊಸಗನ್ನಡದ ಪ್ರಮುಖ ಕವಿಗಳ ಆಯ್ದ ಕವಿತೆಗಳನ್ನಾಧರಿಸಿ, ಕನ್ನಡ ಚಲನಚಿತ್ರದಲ್ಲಿ ಪ್ರಾಥಮಿಕ ತರಬೇತಿ ಮತ್ತು ಪ್ರವೇಶಗಳಿರುವ ಯುವ ಕಲಾವಿದರಿಂದ ೫-೧೦ ನಿಮಿಷ ಅವಧಿಯ ಕಿರುಚಿತ್ರಗಳನ್ನು ನಿರ್ಮಾಣ ಮಾಡಿಸುವುದು, ಮತ್ತು ಆ ಚಿತ್ರಗಳನ್ನು ಕಾವ್ಯಾಸಕ್ತರಿಗೂ ವಿದ್ಯಾರ್ಥಿಗಳಿಗೂ ಉಪಯೋಗವಾಗುವ ಹಾಗೆ, ನವಮಾಧ್ಯಮಗಳೂ ಸೇರಿದಂತೆ, ಶೈಕ್ಷಣಿಕವಾಗಿ ಮತ್ತು ವಾಣಿಜ್ಯೀತರ ವಲಯಗಳಲ್ಲಿ ಪ್ರಚುರಪಡಿಸುವುದು ಈ ಕಾರ್ಯಕ್ರಮದ ಸಾರಾಂಶ, ಒಬ್ಬೊಬ್ಬ ಕವಿಯ ಒಂದೊಂದು ಕವಿತೆಯನ್ನಾಧರಿಸಿದ ಈ ಮಾಲಿಕೆಯ ಕಿರುಚಿತ್ರಗಳು, ಆಯಾ ಕವನವನ್ನು ಪರಿಚಯಿಸುವ ಸಾಧನವಾಗಿಯೂ ಮತ್ತು ಯುವ ಚಿತ್ರನಿರ್ದೇಶಕರು ಆ ಕವಿತೆಗೆ ಪ್ರತಿಸ್ಪಂದಿಸುವ ರೂಪಕಗಳಂತೆಯೂ ಇರಬೇಕು ಎಂಬುದು ಈ ಯೋಜನೆಯ ಆಶಯ.‍‍‍‍

ಸಂದರ್ಭ‍

ಇವತ್ತಿನ ಕಾಲದ ೧೮ರಿಂದ ೪೦ ವರ್ಷದೊಳಗಿನ ಯುವಕರು ಕನ್ನಡ ಭಾಷೆ-ಸಾಹಿತ್ಯ-ಸಂಸ್ಕೃತಿಗಳಲ್ಲಿ ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲವೆಂಬ ಒಂದು ದೂರು ಆಗಾಗ ಕೇಳಿ ಬರುತ್ತಿದೆ. ಈ ಹೇಳಿಕೆಯ ಸತ್ಯಾಸತ್ಯತೆಯು ಚರ್ಚಾಸ್ಪದವಾದರೂ, ಆ ವಯೋಮಾನದ ಹೊಸ ಕಾಲದ ಆಸಕ್ತರಿಗೆ ಕನ್ನಡ ಸಾಹಿತ್ಯ-ಕಲೆ-ಸಂಸ್ಕೃತಿಯ ಪರಿಚಯ ಮಾಡಿಸುವ ಪ್ರಯತ್ನಗಳು ನಡೆದದ್ದು ಕಡಿಮೆಯೆಂಬುದಂತೂ ನಿಜ. ಅದರಲ್ಲೂ ಮುಖ್ಯವಾಗಿ ನವಮಾಧ್ಯಮಗಳಿಂದ ಆಕರ್ಷಿತರಾಗಿ ಆಧುನಿಕೋತ್ತರ ಸಂವಹನೋಪಕರಣಗಳ ಮೂಲಕ ವ್ಯವಹರಿಸುವುದನ್ನು ರೂಢಿಸಿಕೊಂಡ ಆ ವಯೋಮಾನಕ್ಕೆ ಸಾಂಪ್ರದಾಯಿಕವಾದ ಪುಸ್ತಕ-ಪ್ರದರ್ಶನ-ವಿಚಾರ ಸಂಕಿರಣಗಳಿಗಿಂತ ಭಿನ್ನವಾದ ಸಾಂಸ್ಕೃತಿಕ ವೇದಿಕೆಗಳನ್ನು ರೂಪಿಸಿಕೊಡುವಲ್ಲಿ ನಮ್ಮ ಕಾಲವು ಹಿಂದುಳಿದಿದೆ. ಅಂಥ ಕೊರತೆಯನ್ನು ತುಂಬುವ ಪುಟ್ಟ ಪ್ರಯತ್ನವಾಗಬೇಕೆಂಬುದು ಈ ಕಾರ್ಯಕ್ರಮದ ಮೊದಲ ಉದ್ದಿಶ್ಯ. ಕನ್ನಡ ಚಲನಚಿತ್ರರಂಗವನ್ನು ವಾಣಿಜ್ಯೀತರ ಉದ್ದೇಶಗಳಿಂದ ಪ್ರವೇಶ ಮಾಡುತ್ತಿರುವ ಯುವಕಲಾಸಕ್ತರ ಒಂದು ಗುಂಪು ಈಚೆಗೆ ವರ್ಧಿಸತೊಡಗಿದೆ. ಇಂಥ ಕೆಲವು ನಿರ್ದೇಶಕರನ್ನು ಒಂದುಗೂಡಿಸಿ, ಕನ್ನಡ ಕಾವ್ಯಕ್ಕೆ ಅವರಿಂದ ಭಿನ್ನ ಮಾಧ್ಯಮವೊಂದರ ಮೂಲಕ ಪ್ರತಿಸ್ಪಂದನೆಯ ವೈವಿಧ್ಯಗಳನ್ನು ಸೃಷ್ಟಿಸುವುದು ಈ ಯೋಜನೆಯ ಇನ್ನೊಂದು ಗುರಿ.

ಉದ್ದೇಶ

ಕಾವ್ಯ, ಸಾಹಿತ್ಯ ಮತ್ತು ಕಲಾಶಿಕ್ಷಣಗಳು ಇಂದು ಹಲವು ಬಗೆಗಳಿಂದ ಅಪಾಯಕ್ಕೆ ಸಿಲುಕಿವೆ. ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಸಾಹಿತ್ಯ-ಕಲಾಶಿಕ್ಷಣ ಈಗ ಅಲ್ಪಸಂಖ್ಯಾತವಾಗತೊಡಗಿರುವುದೇ ಅಲ್ಲದೆ, ಇರುವ ಮಾರ್ಗಗಳೂ ಪದವಿ ಸಂಗ್ರಹದ ಗುರಿಗೆ ಸೀಮಿತಗೊಂಡು ಯುವ ಜನರ ಆಸಕ್ತಿಯನ್ನು ಸೆಳೆಯಲು ವಿಫಲವಾಗಿರುವಂತೆ ಕಾಣುತ್ತಿದೆ. ಇನ್ನು ಕಲಾಶಿಕ್ಷಣವನ್ನೇ ಗುರಿಯಾಗಿರಿಸಿಕೊಂಡ ಕೇಂದ್ರಗಳು ಮತ್ತು ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯುತ್ತಿವೆಯಾದರೂ ಅವುಗಳ ಸಂಖ್ಯೆ ತುಂಬ ಕಡಿಮೆ. ಅಂಥ ಕಾರ್ಯಕ್ರಮಗಳಲ್ಲಿ ಕೂಡ, ಸಾಹಿತ್ಯ-ಕಲೆಗಳನ್ನು ಕುರಿತ ಉಪನ್ಯಾಸಗಳೇ ಕೇಂದ್ರ ಸ್ಥಾನ ಪಡೆದು ಆಸಕ್ತಿದಾಯಕವಾದ ದ್ರಶ್ಯ-ಶ್ರವ್ಯ ಸಂವಹನಾ ಸಂಪನ್ಮೂಲಗಳಿಂದ ಅವು ದೂರ ಉಳಿದಿವೆ. ಈ ಯೋಜನೆಯು ಅಂಥ ಸಂಸ್ಕೃತಿ ಸಂವಹನೆಯ ಸಂಪನ್ಮೂಲ ಸೃಷ್ಟಿಯ ಮೊದಲ ಹೆಜ್ಜೆ ಕೂಡ, ಅಂದರೆ, ಶಾಲಾಕಾಲೇಜುಗಳಿಗೆ ಮತ್ತು ಸ್ವತಃ ನೀನಾಸಮ್ ಪ್ರತಿಷ್ಠಾನವೂ ಸೇರಿದಂತೆ ಹಲವು ಸಂಸ್ಥೆಗಳು ನಡೆಸುವ ಅಧ್ಯಯನ ಶಿಬಿರಗಳಿಗೆ ಈ ಚಿತ್ರಗಳು ಪಠ್ಯವಸ್ತುಗಳಾಗಿ ಉಪಯೋಗವಾಗಬೇಕೆ೦ಬ ಇರಾದೆ ಈ ಯೋಜನೆಯ ಹಿ೦ದಿದೆ.

ಇಗೋ ನೋಡಿ… ೨೦೧೬ರ ಕಾವ್ಯ ಕನ್ನಡಿ

೮ ಕವಿಗಳ – ೮ ಕವಿತೆಗಳ – ೮ ಕಿರುಚಿತ್ರಗಳು

ಸ್ವಂ‍ತ ಚಿತ್ರ‍‍‍‍‍‍
ಕವಿ: ಚಂದ್ರಶೇಖರ ಕಂಬಾರ
ಚಿತ್ರ ನಿರ್ದೇಶನ: ಮೌನೇಶ ಬಡಿಗೇರ

ಹೊನಲ ಹಾಡು
ಕವಿ: ಪು.ತಿ.ನ
ನಿರ್ದೇಶನ: ಶಿಶಿರ ಕೆ.ವಿ‍

ಸೋಮನಾಥಪುರ ದೇವಾಲಯ
ಕವಿ: ಕುವೆಂಪು
ಚಿತ್ರ ನಿರ್ದೇಶನ: ಮೌನೇಶ ಬಡಿಗೇರ

ನೀವಲ್ಲವೆ
ಕವಿ: ಕೆ.ಎಸ್. ನರಸಿಂಹಸ್ವಾಮಿ
ನಿರ್ದೇಶನ: ಬಾಲಾಜಿ ಮನೋಹರ್

ಪುಟ್ಟ ವಿಧವೆ
ಕವಿ: ದ.ರಾ. ಬೇಂದ್ರೆ
ನಿರ್ದೇಶನ: ಅರವಿಂದ ಕುಪ್ಳೀಕರ್

ಮಿಥಿಲೆ
ಕವಿ: ಸು.ರಂ. ಎಕ್ಕುಂಡಿ
ನಿರ್ದೇಶನ: ಶಿಶಿರ ಕೆ.ವಿ

ಮುದುಕಿಯರಿಗಿದು ಕಾಲವಲ್ಲ
ಕವಿ: ಪ್ರತಿಭಾ ನಂದಕುಮಾರ್
ನಿರ್ದೇಶನ: ಅರವಿಂದ ಕುಪ್ಳೀಕರ್

ಅಗ್ನಿಶಾಮಕರು
ಕವಿ: ಡಾ. ಸಿದ್ಧಲಿಂಗಯ್ಯ
ನಿರ್ದೇಶನ: ಬಾಲಾಜಿ ಮನೋಹರ್

ಕನ್ನಡ ಕಾವ್ಯ ಕನ್ನಡಿಮತ್ತೆ ಮತ್ತೆ ನೋಡಿದೆಮತ್ತೆ ಮತ್ತೆ ನೋಡಬೇಕಾದ ಕನ್ನಡಿ ಇದು. ಆಯಾ ನಿರ್ದೇಶಕ ಒಂದು ಕವಿತೆಯನ್ನು ಸಾಮೂಹಿಕವಾಗಿ ಓದಿ, ಬಳಿಕ ಕಾವ್ಯಾನುಭವವನ್ನು ಖಾಸಗಿ ಗ್ರಹಿಕೆಗೆ ಇಳಿಸಿಕೊಳ್ಳುವ ಅತ್ಯಾಕರ್ಷಕ ಪ್ರಯೋಗವಿದು. ಹಾಗೆ ಖಾಸಗಿ ನೆಲೆಗೆ ಇಳಿಸಿಕೊಳ್ಳುವಲ್ಲಿ ಆತ ಮತ್ತೆ ಸಾರ್ವಜನಿಕ ಸಂಗತಿಗಳನ್ನು ಅವಲಂಬಿಸಿ ಸಾರ್ವತ್ರಿಕಕತೆಯನ್ನು ಕಲೆಯ ಆಯಾಮದಿಂದ ತೊಡೆದು ಹಾಕುವ ಬೆರಗು ನೋಡುಗರ ಸಂವೇದನೆಗೆ ಕಂಪನ ಒದಗಿಸುವಂತಿದೆ. ನನಗೆ ತುಂಬ ಇಷ್ಟವಾಗಿದೆ ಪ್ರಯೋಗ.ಹೊನಲ ಹಾಡು, ನೀವಲ್ಲವೆ ಕವಿತೆಗಳ ಗ್ರಹಿಕೆಯಲ್ಲಿ ಈವತ್ತನ್ನು ಕಾವ್ಯಾನುಭವದಲ್ಲಿ ಕರಗಿಸಿಕೊಳ್ಳುವ ಕ್ರಮ ಅದ್ಭುತವೆನಿಸುವಂತಿದೆ.

ಎಚ್ಚೆಸ್ವಿ

ಕವಿ, ನಾಟಕಕಾರ

ಚಿತ್ರಮಾಲಿಕೆಯ ಪರಿಕಲ್ಪನೆಗೆ ನೆರವಾದ ಸಲಹೆಗಾರರು

ಅಕ್ಷರ ಕೆ.ವಿ. | ಅಭಯ ಸಿಂಹ | ಅಶೋಕ ಟಿ.ಪಿ. | ಅಶೋಕ ಹೆಗಡೆ | ಎನ್.ಎ.ಎಮ್ ಇಸ್ಮಾಯಿಲ್ | ಗಿರೀಶ್ ಕಾಸರವಳ್ಳಿ | ಜಸವಂತ ಜಾಧವ್ | ದಿವಾಕರ್ ಎಸ್. | ದೀಪಾ ಗಣೇಶ್ | ವಿಜಯಶಂಕರ ಎಸ್.ಆರ್ | ವಿವೇಕ ಶಾನಭಾಗ

ಧನಸಹಾಯ ನೀಡಿದವರು

ಅಕ್ಷರ ಕೆ.ವಿ | ಅನು ಬೆರಿ | ಅಶೋಕ ಹೆಗಡೆ | ಗುರುಲಿಂಗ ಅಮ್ಮಣಗಿ | ದೀಪಾ ಎಸ್. | ನರಹರಿ ಗೋವಿಂದರಾಜು | ನಾಗರಾಜ್ ಎಸ್. | ನೀಲೇಶ್ ಪಾಠಕ್ | ಪ್ರಶಾಂತ್ ಕೆ. | ಮಂಜುನಾಥ ಜಿ.ಕೆ. | ಮಧುಸೂದನ ಸಿ.ವಿ. | ಮಹೇಶ ಸುಂದರಮ್ | ರಮೇಶ ಅಮರಚಲ್ಲ | ರೂಪೇಶ್ ಕುಮಾರ್ | ಸಚ್ಚಿದಾನಂದ ಜವಳಿ | ಸುರೇಶ್ ಮೇದಾ | ಹಟ್ಟಿ ಗೋಲ್ಡ್ ಮೈನ್ಸ್ ಕಂಪೆನಿ ಲಿ.

Support Sanchi Efforts

You can support “Sanchi Foundation” by donating a small amount. You can also involve yourself in our projects effectively by sharing your ideas, organizing events, implementing and executing projects which make big difference or also by making a small payment towards donations.

All donations to Sanchi Foundation (R) get 80G income tax exemption.

Creative Commons License

Ninasam Kavya Kannadi Project 2016 is licensed under a Creative Commons Attribution 4.0 International License.